ನ್ಯೂಸ್

ಮೂರು ಷರತ್ತಿನಿಂದ ಪೈಲಟ್​ರನ್ನು ಕಟ್ಟು ಹಾಕಿದ ಗೆಹ್ಲೋಟ್​: ಖುರ್ಚಿ ಏರುವ ಮುನ್ನವೇ ರಂಗೇರಿದ ಫೈಟಿಂಗ್!

ಜೈಪುರ (ರಾಜಸ್ಥಾನ): ರಾಜಸ್ಥಾನದ ರಾಜಕೀಯದಲ್ಲಿ ಕ್ಷಣಕ್ಷಣದ ಕುತೂಹಲ ನಡೆಯುತ್ತಿದೆ. ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ತಯಾರಿ ನಡೆಯುತ್ತಿರುವ ನಡುವೆಯೇ ರಾಜಸ್ಥಾನದಲ್ಲಿ ರಾಜಕೀಯದಲ್ಲಿ ಬಿರುಗಾಳಿಯೇ ಎದ್ದುಬಿಟ್ಟಿದೆ.

ಕಾಂಗ್ರೆಸ್‌ನ 'ಒಂದು ಹುದ್ದೆಗೆ ಒಬ್ಬ ವ್ಯಕ್ತಿ' ಎಂದು ರಾಹುಲ್​ ಗಾಂಧಿ ಹೇಳಿರುವ ಕಾರಣದಿಂದ ಗೆಹ್ಲೋಟ್​ ಅಧ್ಯಕ್ಷರಾದರೆ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಲೇಬೇಕಿದೆ. ಅವರು ಅಧ್ಯಕ್ಷರಾಗುತ್ತಾರೋ, ಬಿಡುತ್ತಾರೋ ಸದ್ಯ ತಿಳಿದಿಲ್ಲ. ಏಕೆಂದರೆ ಇದಾಗಲೇ ಅಧ್ಯಕ್ಷ ಸ್ಥಾನಕ್ಕೆ ಸಂಸದ ಶಶಿ ತರೂರ್​ ಅವರೂ ಸ್ಪರ್ಧಿಸಹೊರಟಿದ್ದು, ರಾಹುಲ್​ ಗಾಂಧಿಯವರನ್ನು ಬಿಟ್ಟರೆ, ಬೇರೆ ಯಾರೂ ತಮಗೆ ಅಧ್ಯಕ್ಷರು ಬೇಡ ಎನ್ನುತ್ತಿದ್ದಾರೆ ಕಾರ್ಯಕರ್ತರು.

ಆದರೆ ಅಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನವೇ ರಾಜಸ್ಥಾನದ ರಾಜಕೀಯದಲ್ಲಿ ಕೋಲಾಹಲವೇ ಎದ್ದುಬಿಟ್ಟಿದೆ. ಒಂದು ವೇಳೆ ಗೆಹ್ಲೋಟ್​ ಅಧ್ಯಕ್ಷರಾದರೆ ಮುಖ್ಯಮಂತ್ರಿಯಾಗಿ ಮಾಜಿ ಡಿಸಿಎಂ ಸಚಿನ್ ಪೈಲಟ್‌ ಹುದ್ದೆಗೇರುತ್ತಾರೆ ಎಂದೇ ನಿನ್ನೆಯವರೆಗೆ ಅಂದುಕೊಳ್ಳಲಾಗಿತ್ತು. ಆದರೆ ಗೆಹ್ಲೋಟ್ ಬಣದ ಶಾಸಕರು ಸಚಿನ್ ಪೈಲಟ್ ಸಿಎಂ ಎಂದು ಒಪ್ಪಿಕೊಳ್ಳಲು ತಯಾರಿಲ್ಲದ ಕಾರಣ ಇದಾಗಲೇ 90 ಮಂದಿ ರಾಜೀನಾಮೆಯನ್ನೂ ಕೊಟ್ಟು ಬಿಟ್ಟಿದ್ದಾರೆ.

ಸ್ವತಂತ್ರ ಶಾಸಕರು ಸೇರಿ ಸುಮಾರು 100 ಶಾಸಕರು ಅಶೋಕ್ ಗೆಹ್ಲೋಟ್ ಬಣದವರಾಗಿದ್ದಾರೆ. ಇನ್ನು ನಿನ್ನೆ ಭಾನುವಾರ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿತ್ತು. ಆದರೆ ರಾಜೀನಾಮೆಯಿಂದಾಗಿ ಸಭೆ ನಡೆದಿಲ್ಲ. ರಾಜೀನಾಮೆಯ ಹಿಂದೆ ಗೆಹ್ಲೋಟ್​ ಕೈವಾಡ ಇದೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಪೈಲಟ್ ಅನ್ನು ನಿಷ್ಪ್ರಯೋಜಕ ಎಂದು ಇದಾಗಲೇ ಗೆಹ್ಲೋಟ್​ ಕರೆದಿದ್ದರು.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಕುರಿತು  ಕಾಂಗ್ರೆಸ್ ಮುಂದೆ ಅಶೋಕ್ ಗೆಹ್ಲೋಟ್ ಹಾಗೂ ಅವರ ಬಣದ ಶಾಸಕರು 3 ಬೇಡಿಕೆಗಳನ್ನು ಇಟ್ಟಿದ್ದಾರೆ.

1) ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ನಂತರವೇ ರಾಜಸ್ಥಾನದ ನೂತನ ಸಿಎಂ ಆಯ್ಕೆಯಾಗಬೇಕು ಎನ್ನುವುದು ಮೊದಲ ಷರತ್ತು. ಈ ಬಗ್ಗೆ ಇದಾಗಲೇ ಗೆಹ್ಲೋಟ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಗೆಹ್ಲೋಟ್​ ಬಣದ ಶಾಸಕರು ಒತ್ತಾಯ ಮಂಡಿಸಿದ್ದಾರೆ. 

2) 2020ರ ವಿದ್ಯುತ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 102 ಶಾಸಕರ ಪೈಕಿಯೇ ಒಬ್ಬ ಹೊಸ ಸಿಎಂ ಆಗಬೇಕೇ ಹೊರತು ಅದನ್ನು ಬೀಳಿಸುವ ಪ್ರಯತ್ನದಲ್ಲಿ ತೊಡಗಿರುವವರಲ್ಲ ಎನ್ನುವುದು ಎರಡನೆಯ ಷರತ್ತು.

3) ರಾಜಸ್ಥಾನದ ಸಿಎಂ ಆಯ್ಕೆ ಗೆಹ್ಲೋಟ್​ ಅವರದ್ದೇ ಆಗಿರಬೇಕು ಎನ್ನುವುದು ಮೂರನೆಯ ಷರತ್ತು.  ಈ ಕಾರಣದಿಂದಾಗಿ ಸದ್ಯ ರಾಜಸ್ಥಾನದ ಬಿಕ್ಕಟ್ಟು ಮುಗಿಯುವಂತೆ ಕಾಣುತ್ತಿಲ್ಲ. 

ಅಕ್ಟೋಬರ್ 19 ರಂದು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಬರಲಿದೆ. ಗೆಹ್ಲೋಟ್ ಬಣದ ಶಾಸಕರು ಅಕ್ಟೋಬರ್ 19 ರವರೆಗೆ ಯಾವುದೇ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ರಾಜಸ್ಥಾನದ ರಾಜಕೀಯದಲ್ಲಿ ಇಂದು ನಿರ್ಣಾಯಕ ದಿನವಾಗಿದ್ದು, ಇಂದು ಪಕ್ಷದ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಳ್ಳಬಹುದು. (ಏಜೆನ್ಸೀಸ್​)