ಮುಂಬೈ: ನಾನ್ಯಾರು? ನನಗೆ ಐಡೆಂಟಿಟಿ ಅನ್ನುವುದು ಇಲ್ಲವಾ? ನಿಕ್ ಜೋನಸ್ ಪತ್ನಿ ಎಂದು ಸಂಬೋಧಿಸಲು ನೀವ್ಯಾರು? ನನಗಷ್ಟೇ ಅಲ್ಲ... ಇಂದಿಗೂ ಮಹಿಳೆಯರಿಗೆ ಏಕೆ ಹೀಗೆ ಆಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ನಟಿ ಪ್ರಿಯಾಂಕಾ ಛೋಪ್ರಾ ಕಿಡಿ ಕಾರಿದ್ದಾರೆ.
ಅಷ್ಟಕ್ಕೂ ಅವರು ಗರಂ ಆಗುವುದಕ್ಕೆ ಕಾರಣ, ತಾವು ಅಷ್ಟು ಪ್ರಸಿದ್ಧಿ ಹೊಂದಿದ್ದರೂ ಗಂಡನ ಹೆಸರು ಹೇಳಿ, ಅವರ ಪತ್ನಿ ಇವರು ಎಂದು ಹೇಳಿರುವುದು. ಈ ಕುರಿತು ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನಟಿ, ನಾನು, ಸಾರ್ವಕಾಲಿಕ ಐಕಾನಿಕ್. ಪ್ರಿಯಾಂಕಾ ಛೋಪ್ರಾ ಅಂದರೆ ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ. ಫಿಲ್ಮ್ ಫ್ರಾಂಚೈಸಿಯನ್ನು ಕೂಡ ನಾನೇ ಪ್ರಮೋಟ್ ಮಾಡುತ್ತಿದ್ದೇನೆ. ಆದರೆ ಇದರ ಕಾರ್ಯಕ್ರಮದಲ್ಲಿಯೂ ಪ್ರಿಯಾಂಕಾ ಛೋಪ್ರಾ ಅನ್ನುವ ಬದಲು ’ವೈಫ್ ಆಫ್...’ ಎಂದೇ ಸಂಬೋಧಿಸಲಾಗಿದೆ. ಇದ್ಯಾವ ನ್ಯಾಯ? ಮಹಿಳೆಯರಿಗೆ ಏಕೀ ಅನ್ಯಾಯ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಮುಂಬರುವ ಚಿತ್ರ "ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್" ಪ್ರಚಾರದಲ್ಲಿ ನಿರತರಾಗಿರುವ ನಟಿ, ಮಾಧ್ಯಮ ಸಂಸ್ಥೆಯೊಂದು ವರದಿಯಲ್ಲಿ ನಿಕ್ ಜೋನಸ್ ಪತ್ನಿ ಎಂದು ಬರೆದಿರುವುದಕ್ಕೆ ಅವರು ಈ ರೀತಿ ಗರಂ ಆಗಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ನನಗೆ ನನ್ನದೇ ಆದ ಗುರುತು ಇದೆ. ಇದನ್ನು ಸಾಬೀತು ಮಾಡಲು ಸಾಮಾಜಿಕ ಮಾಧ್ಯಮಗಳ ಖಾತೆಯ ಬಯೊದಲ್ಲಿ ಐಎಂಡಿಬಿ (ಸಿನಿಮಾ, ಟಿವಿ ಸರಣಿ ಮುಂತಾದ ಮನರಂಜನಾ ಕ್ಷೇತ್ರದ ಮಾಹಿತಿಯನ್ನೊಳಗೊಂಡ ಆನ್‌ಲೈನ್ ಡೇಟಾ ಬೇಸ್) ಲಿಂಕ್ ಶೇರ್ ಮಾಡಬೇಕೇ? ಇಂದಿಗೂ ಮಹಿಳೆಯರಿಗೆ ಏಕೆ ಹೀಗೆ ಆಗುತ್ತಿದೆ? ಈ ಬಗ್ಗೆ ವಿವರಣೆ ನೀಡಿ’ ಎಂದು ಗಂಡನ ಹೆಸರು ಹೇಳಿ ಪತ್ನಿಯರನ್ನು ಗುರುತಿಸುವುದನ್ನು ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ಅನ್ನು ತಮ್ಮ ಪತಿ ನಿಕ್ ಜೋನಸ್ ಖಾತೆಗೂ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಹಲವಾರು ಮಹಿಳೆಯರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ಇಂದಿನ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ. ನೀವು ಹೇಳಿದ್ದು ಸರಿ ಇದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.