ನವದೆಹಲಿ: ವಿರೋಧಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಇದ್ದ ತೀವ್ರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಕೆಲವು ನಾಯಕರ ಹೆಸರು ಇದರಲ್ಲಿ ಕೇಳಿಬಂದಿತ್ತು.
ಇದೀಗ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ್ದ ಹಿರಿಯ ರಾಜಕೀಯ ನೇತಾರ ಯಶವಂತ್ ಸಿನ್ಹಾ ಅವರನ್ನು ಪ್ರತಿಪಕ್ಷಗಳ ಕಡೆಯಿಂದ ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ನಂಬಲರ್ಹ ಮೂಲಗಳ ಪ್ರಕಾರ ಸಿನ್ಹಾ ಅವರನ್ನು ರಾಷ್ಟ್ರಪತಿ ಹುದ್ದೆಯ ಒಮ್ಮತದ ಅಭ್ಯರ್ಥಿಯನ್ನಾಗಿಸಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.
ಬರುವ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ವಿರೋಧಪಕ್ಷಗಳ ಒಮ್ಮತದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕಗ್ಗಂಟು ಬಗೆಹರಿದಿರಲಿಲ್ಲ. ಇದುವರೆಗೂ ಮೂವರ ಹೆಸರನ್ನು ಸೂಚಿಸಲಾಗಿತ್ತು. ಆದರೆ ಮೂವರು ನಾಯಕರು ಹಿಂದೆ ಸರಿದಿದ್ದರಿಂದ ಇನ್ನಷ್ಟು ಸಮಸ್ಯೆ ಬಿಗಡಾಯಿಸಿತ್ತು. ಇದೀಗ ಸಿನ್ಹಾ ಅವರನ್ನು ಅಂತಿಮಗೊಳಿಸಿರುವುದಾಗಿ ಹೇಳಲಾಗಿದೆ.
ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಯಶವಂತ್ ಸಿನ್ಹಾ ಅವರು ಟಿಎಂಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಪ್ರತಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ವಿಶಾಲ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ಉದ್ದೇಶದಿಂದ ತಾವು ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದ್ದರು. ಆಗಲೇ ಇವರು ರಾಷ್ಟ್ರಪತಿ ಅಭ್ಯರ್ಥಿ ಎಂದು ಅಂತಿಮಗೊಂಡಿರುವ ಬಗ್ಗೆ ಸ್ಪಷ್ಟವಾಗಿದೆ.
"ಟಿಎಂಸಿಯಲ್ಲಿ ಮಮತಾ ಅವರು ನನಗೆ ನೀಡಿದ ಗೌರವ ಹಾಗೂ ಪ್ರತಿಷ್ಠೆಗಾಗಿ ಅವರಿಗೆ ಕೃತಜ್ಞನಾಗಿದ್ದೇನೆ. ದೊಡ್ಡಮಟ್ಟದ ರಾಷ್ಟ್ರೀಯ ಹಿತಾಸಕ್ತಿ ಕಾರಣದಿಂದ ನಾನು ವಿರೋಧ ಪಕ್ಷಗಳ ಒಗ್ಗಟ್ಟಿಗೆ ದುಡಿಯುವ ಸಲುವಾಗಿ ಹುದ್ದೆಯಿಂದ ಕೆಳಕ್ಕಿಳಿಯುವ ಸಮಯ ಈಗ ಬಂದಿದೆ. ಅವರು ಈ ಹೆಜ್ಜೆಯನ್ನು ಅನುಮೋದಿಸುತ್ತಾರೆ ಎಂದು ನನಗೆ ಖಾತರಿ ಇದೆ" ಎಂದು ಅವರು ಬರೆದುಕೊಂಡಿದ್ದಾರೆ.
ಯಶವಂತ್ ಸಿನ್ಹಾ ಅವರು 2018ರಲ್ಲಿ ಬಿಜೆಪಿ ತೊರೆದಿದ್ದರು. 2021ರಲ್ಲಿ ಟಿಎಂಸಿ ಸೇರಿಕೊಂಡಿದ್ದರು. ಬಳಿಕ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು.