ನ್ಯೂಸ್

ದೇಶ ದಿವಾಳಿಯಾದ್ರೂ ಹಾಲಿ, ಮಾಜಿ ಪ್ರಧಾನಿಯರಿಗಿಂತ ಪತ್ನಿಯರೇ ಶ್ರೀಮಂತರು- ವರದಿ ಬಹಿರಂಗ!

ಇಸ್ಲಾಮಾಬಾದ್: ಸದ್ಯ ಪಾಕಿಸ್ತಾನದ ಆರ್ಥಿಕ ಸ್ಥಿತಿ ಅಯೋಮಯವಾಗಿದೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇನ್ನೇನು ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳಲಿದೆ ಎಂಬಂತಾಗಿದೆ ಸ್ಥಿತಿ. ಕುಡಿಯುವ ಚಹದ ಪ್ರಮಾಣವನ್ನು ಕಡಿಮೆ ಮಾಡುವಂತೆ ಇದಾಗಲೇ ತನ್ನ ಪ್ರಜೆಗಳಿಗೆ ಪಾಕ್​ ಮನವಿ ಮಾಡಿಕೊಂಡಿದೆ. ನಾವು ಸಾಲದ ಹಣದಿಂದ ಚಹಾವನ್ನು ಆಮದು ಮಾಡಿಕೊಳ್ಳುವುದರಿಂದ ಚಹಾ ಸೇವನೆಯನ್ನು 1 ರಿಂದ 2 ಕಪ್‌ಗಳಷ್ಟು ಕಡಿಮೆಗೊಳಿಸುವಂತೆ ನಾನು ರಾಷ್ಟ್ರಕ್ಕೆ ಮನವಿ ಮಾಡುತ್ತೇನೆ ಎಂದು ಯೋಜನಾ ಮಂತ್ರಿ ಅಶಾನ್​ ಇಕ್ಬಾಲ್ ಮನವಿ ಮಾಡಿಕೊಂಡಿದ್ದಾರೆ.

ಇದರ ನಡುವೆಯೇ ಕುತೂಹಲ ಎನ್ನುವ ವರದಿಯೊಂದು ಇದೀಗ ಬಹಿರಂಗಗೊಮಡಿದೆ. ಅದೇನೆಂದರೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಹಾಗೂ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಇಬ್ಬರ ಪತ್ನಿಯರು ತಮ್ಮ ಪತಿಗಿಂತಲೂ ಶ್ರೀಮಂತರಾಗಿದ್ದಾರೆ ಎನ್ನುವುದು!

ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ 2020ರ ಜೂನ್ 30ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಈ ವಿಷಯ ಬಹಿರಂಗಗೊಮಡಿದೆ.

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಅಧ್ಯಕ್ಷರೂ ಆಗಿರೋ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ರೂಪಾಯಿ 2 ಲಕ್ಷ ( ಭಾರತದ 75,201 ರೂಪಾಯಿ) ಮೌಲ್ಯದ ನಾಲ್ಕು ಮೇಕೆಗಳನ್ನು ಹೊಂದಿದ್ದಾರೆ. ಅವರು ಆರು ಚಿರ ಮತ್ತು ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದಾರೆ. ದೇಶದ ಹೊರಗೆ ಯಾವುದೇ ರೀತಿಯ ವಾಹನ ಅಥವಾ ಆಸ್ತಿಯನ್ನು ಹೊಂದಿಲ್ಲ. ಅವರು ಯಾವುದೇ ಹೂಡಿಕೆಯನ್ನು ಮಾಡಿಲ್ಲ. ಅವರು ಪಾಕಿಸ್ತಾನಿ ವಿದೇಶಿ ಕರೆನ್ಸಿ ಖಾತೆಗಳಲ್ಲಿ 3,29,196 ಡಾಲರ್ (2.57 ಕೋಟಿ ರೂ.) ಮತ್ತು 518-ಪೌಂಡ್ ಸ್ಟರ್ಲಿಂಗ್ (49,116 ರೂ.) ಹೊರತುಪಡಿಸಿ, ಬ್ಯಾಂಕ್ ಖಾತೆಗಳಲ್ಲಿ 2.25 ಕೋಟಿ ರೂ.ಗಿಂತಲೂ ಹೆಚ್ಚು ಹಣ ಹೊಂದಿದ್ದಾರೆ.

ಇವರು ಅಧಿಕೃತವಾಗಿ ಇಲ್ಲಿಯವರೆಗೆ ಮೂವರು ಪತ್ನಿಯರನ್ನು ಹೊಂದಿದ್ದು, ಅವರ ಪೈಕಿ ಹಾಲಿ ಪತ್ನಿ ಬುಶ್ರಾ ಬೀಬಿಯವರ ಆಸ್ತಿಯ ಒಟ್ಟು ಮೌಲ್ಯವು ಪಾಕಿಸ್ತಾನದ ಕರೆನ್ಸಿ 142.11 ಮಿಲಿಯನ್ (ಅಂದರೆ ಭಾರತದ 1,108 ಕೋಟಿ ರೂ.) ಆಗಿದೆ. ಜತೆಗೆ ನಾಲ್ಕು ಚಿರಾಸ್ಥಿಗಳನ್ನು ಹೊಂದಿದ್ದಾರೆ.

ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿಷಯ ಹೇಳುವುದಾದರೆ, ಇವರು ಇಲ್ಲಿಯವರೆಗೆ ನಾಲ್ವರು ಪತ್ನಿಯನ್ನು ಹೊಂದಿದ್ದಾರೆ. ಶೆಹಬಾಜ್ ಷರೀಫ್​ ಇವರ ಒಟ್ಟೂ ಆಸ್ತಿ ಪಿಕೆಆರ್ 104.21 ಮಿಲಿಯನ್ ಅಂದರೆ ಭಾರತದ ಲೆಕ್ಕದಲ್ಲಿ ಹೇಳುವುದಾದರೆ 812 ಕೋಟಿ ರೂಪಾಯಿ. ಆದರೆ ಇವರ ಮೊದಲ ಪತ್ನಿ ನುಸ್ರತ್ ಶೆಹಬಾಜ್ ಆಸ್ತಿ ಪಿಕೆಆರ್ 230.29 ಮಿಲಿಯನ್ ಅರ್ಥಾತ್​ 1,795 ಕೋಟಿ ರೂ. ನುಸ್ರತ್​ ಲಾಹೋರ್ ಮತ್ತು ಹಜಾರಾ ವಿಭಾಗಗಳಲ್ಲಿ ಒಂಬತ್ತು ಕೃಷಿ ಭೂಮಿ ಮತ್ತು ಒಂದು ಮನೆ ಹೊಂದಿದ್ದಾರೆ. ಅವರು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದ್ದಾರೆ.