ಲಖನೌ: ಗ್ರಾಮ ಪಂಚಾಯಿತಿಯಿಂದ ಹಿಡಿದು ದೊಡ್ಡ ಮಟ್ಟದ ಚುನಾವಣೆ ಯಾವುದೇ ಇದ್ದರೂ ಚುನಾವಣೆ ಸಮೀಪಿಸಿತು ಎಂದರೆ ಹಣ, ಹೆಂಡ ಸೇರಿದಂತೆ ವಿವಿಧ ವಸ್ತುಗಳನ್ನು ವಶ ಪಡಿಸಿಕೊಳ್ಳುವುದು ನಡೆದೇ ಇರುತ್ತದೆ.
ಮತದಾರರನ್ನು ಆಕರ್ಷಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ವಿವಿಧ ರೀತಿಯ ಆಮಿಷ ಒಡ್ಡಲು ರಾಶಿ ರಾಶಿ ಹಣ, ಮದ್ಯ ಹಾಗೂ ಇನ್ನಿತರ ವಸ್ತುಗಳನ್ನು ಒಂದೆಡೆ ಕೂಡಿ ಹಾಕುವುದು, ಅವುಗಳನ್ನು ಪೊಲೀಸರು ಸೀಜ್ ಮಾಡುವುದು ಎಲ್ಲವೂ ಮಾಮೂಲು.
ಆದರೆ ಉತ್ತರ ಪ್ರದೇಶದ ಹಸಂಗಂಜ್‍ನ ಗ್ರಾಮ ಪಂಚಾಯತಿ ಚುನಾವಣೆಗೆ ಎಲ್ಲಕ್ಕಿಂತ ಸ್ವಲ್ಪ ಭಿನ್ನವಾದದ್ದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದೇನೆಂದರೆ ಜಿಲೇಬಿ ಮತ್ತು ಸಮೋಸಾ! ಅಭ್ಯರ್ಥಿಯೊಬ್ಬರು ಮತದಾರರಿಗೆ ಹಂಚುತ್ತಿದ್ದ ಎರಡು ಕ್ವಿಂಟಲ್ ಜಲೇಬಿ ಹಾಗೂ 1,050 ಸಮೋಸಾಗಳನ್ನು ಉನ್ನಾವ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಜತೆಗೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದರಿಂದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲೇಬಿ, ಸಮೋಸಾ ಜತೆ ಎಲ್‍ಪಿಜಿ ಸಿಲಿಂಡರ್, ಹಿಟ್ಟು, ತುಪ್ಪ ಮತ್ತು ಜಲೇಬಿ ಮತ್ತು ಸಮೋಸ ತಯಾರಿಸಲು ಬಳಸುತ್ತಿದ್ದ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಏಪ್ರಿಲ್ 15 ರಿಂದ ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಹಂತದ ಚುನಾವಣೆ ಏಪ್ರಿಲ್ 29ರಂದು ನಡೆಯಲಿದೆ ಹಾಗೂ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ.