ಮುಂಬೈ: ಮಕ್ಕಳು ತಪ್ಪುಹಾದಿಗೆ ಹೋದರೆ ಅವರನ್ನು ಸರಿದಾರಿಗೆ ತರಬೇಕಾದುದು ಪಾಲಕರ ಕರ್ತವ್ಯ ಎನ್ನುತ್ತೇವೆ. ಅದೇ ಇನ್ನೊಂದೆಡೆ ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವ ಮಾತಿದೆ. ಅಂಥದ್ದೇ ಒಂದು ಹೆಗ್ಗಣವನ್ನು ಮುದ್ದು ಮಾಡಲು ಹೋದ ತಾಯಿಯೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಮಗನಿಗೆ ತಿದ್ದಿ ಬುದ್ಧಿಹೇಳಬೇಕಾದ ಅಮ್ಮ, ಪೊಲೀಸರ ಕೈಯಿಂದ ಆತನನ್ನು ರಕ್ಷಿಸಲು ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಲು ಹೋಗಿ ಇದೀಗ ಸಿಕ್ಕಿಬಿದ್ದಿದ್ದಾಳೆ.
ಈ ಘಟನೆ ನಡೆದಿರುವುದು ಮುಂಬೈನ ಮಲ್ವಾನಿಯಲ್ಲಿ. ಕೆಲ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಈ ಯುವಕನನ್ನು ಬಂಧಿಸಲು ಇಬ್ಬರು ಪೊಲೀಸರು ಅಂಬುಜ್ವಾಡಿಯ ನಿವಾಸಕ್ಕೆ ತೆರಳಿದ್ದರು. ತನ್ನ ಮಗನ ಬಗ್ಗೆ ಮೊದಲೇ ಅರಿವಿದ್ದು ಈ ಮಹಾತಾಯಿ, ಪೊಲೀಸರು ಬರುತ್ತಿದ್ದಂತೆಯೇ ಅಡುಗೆ ಮನೆಗೆ ಹೋಗಿ ಖಾರದ ಪುಡಿ ತಂದಿದ್ದಾಳೆ. ಮಗನನ್ನು ಹಿಡಿಯಲು ಪೊಲೀಸರು ಮುಂದಾಗುತ್ತಿದ್ದಂತೆಯೇ ಅವರ ಮೇಲೆ ಇದನ್ನು ಎರಚಿದ್ದಾಳೆ.
ಇದನ್ನೂ ಓದಿ: ಪತಿಯ ಪ್ರೇಯಸಿಗಾಗಿ 3 ವರ್ಷದ ದಾಂಪತ್ಯವನ್ನೇ ತ್ಯಾಗ ಮಾಡಿದ ಪತ್ನಿ! ಎಲ್ಲರಿಗೂ ಸಿಗುವುದಿಲ್ಲ ಇಂತಹ ಹೆಂಡತಿ
ಕಣ್ಣುರಿಯಿಂದ ಪೊಲೀಸರು ಬೊಬ್ಬೆಯಿಡಲು ಶುರುಮಾಡಿದಾಗ ಮಗರಾಯ ತಪ್ಪಿಸಿಕೊಂಡಿದ್ದಾನೆ. ಕಣ್ಣುರಿಯ ನಡುವೆಯೂ ಬಿಡದ ಪೊಲೀಸರು ಮಹಿಳೆಯನ್ನು ಬಂಧಿಸಿ ಕರೆದೊಯ್ದರು.
ಆ ಕ್ಷಣದಲ್ಲಿ ತಪ್ಪಿಸಿಕೊಂಡು ಮಗ ಪರಾರಿಯಾದ ಎಂಬ ಖುಷಿಯಲ್ಲಿ ಅಮ್ಮ ಇದ್ದಳು. ಆದರೆ ಮಗನ ಹಣೆಬರಹ ನೆಟ್ಟಗಿರಲಿಲ್ಲ. ಆತನಿಗೆ ಜಾಲಬೀಸಿದ ಪೊಲೀಸರು ಕೊನೆಗೂ ಅವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅಮ್ಮ-ಮಗ ಇಬ್ಬರೂ ಜೈಲಿನಲ್ಲಿದ್ದಾರೆ.