ನ್ಯೂಸ್

25 ಶಾಲಾ ಮಕ್ಕಳಿಗೆ ವಿಷಹಾಕಿದ್ದ ಶಿಕ್ಷಕಿ! ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್​

ಹಾಂಗ್​ಕಾಂಗ್: ಯಾರದ್ದೋ ಮೇಲಿನ ದ್ವೇಷದಿಂದಾಗಿ 25 ಮಕ್ಕಳಿಗೇ ವಿಷ ನೀಡಿದ್ದ ನಿಷ್ಕರುಣಿ ಶಿಕ್ಷಕಿಯೊಬ್ಬಳಿಗೆ ಗಲ್ಲುಶಿಕ್ಷೆ ವಿಧಿಸಿ ಚೀನಾ ಕೋರ್ಟ್​ ಆದೇಶಿಸಿದೆ.

ತನ್ನ ಸಹೋದ್ಯೋಗಿಯೊಂದಿಗೆ ಜಗಳವಾಡಿದ್ದ ವಾಂಗ್‌ ಯುನ್‌ ಎಂಬ ಮಧ್ಯ ಕಿಂಡನ್‌ಗಾರ್ಟನ್‌ ಶಿಕ್ಷಕಿ, ಈ ಸಿಟ್ಟಿನಿಂದ ಮಕ್ಕಳಿಗೆ ವಿಷ ಹಾಕಿದ್ದಳು. ಈ ಪೈಕಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದ. ಇದು ಅತ್ಯಂತ ಗಂಭೀರ ಅಪರಾಧ ಎಂದಿರುವ ಹೆನಾನ್ ಪ್ರಾಂತ್ಯದ ಜಿಯೌಜೌ ಇಂಟರ್‌ಮೀಡಿಯಟ್ ಪೀಪಲ್ಸ್‌ ಕೋರ್ಟ್ ಮರಣದಂಡನೆ ವಿಧಿಸಿದೆ.

ಕಳೆದ ವರ್ಷದ ಮಾರ್ಚ್​ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ತನ್ನ ಸಹ ಶಿಕ್ಷಕಿ ಜತೆ ವಾಂಗ್​ ಜಗಳವಾಡಿಕೊಂಡಿದ್ದಳು. ವಿದ್ಯಾರ್ಥಿಗಳ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿತ್ತು. ಅವರ ಮೇಲಿನ ದ್ವೇಷದಿಂದ ಮಕ್ಕಳಿಗೆ ಗಂಜಿಯಲ್ಲಿ ನೈಟ್ರೇಟ್ ರಾಸಾಯನಿಕ‌ ಹಾಕಿ ನೀಡಿದ್ದಳು.

ನೈಟ್ರೇಟ್ ಬೆರೆಸಿದ ಗಂಜಿ ಸೇವಿಸಿದ ನಂತರ ಹಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಓರ್ವ ಬಾಲಕ ಮೃತಪಟ್ಟಿದ್ದ. ಉಳಿದ ಮಕ್ಕಳು ತೀವ್ರವಾಗಿ ಅಸ್ವಸ್ಥರಾಗಿದ್ದರು.

ಈ ಕುರಿತು ಕೋರ್ಟ್​ಗೆ ದಾಖಲೆ ಸಲ್ಲಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿರುವ ಕೋರ್ಟ್​ ವಾಂಗ್​ ತಪ್ಪಿತಸ್ಥಳು ಎಂದು ತೀರ್ಪು ನೀಡುವ ಮೂಲಕ ಗಲ್ಲುಶಿಕ್ಷೆ ವಿಧಿಸಿದೆ.