ನ್ಯೂಸ್

ಪೆಟ್ರೋಲ್ ಬಂಕ್​ನಲ್ಲಿ ಭಾರಿ ಅಗ್ನಿ ದುರಂತ: ಎಂಟು ಮಂದಿಗೆ ಗಾಯ- ಇಬ್ಬರ ಸ್ಥಿತಿ ಚಿಂತಾಜನಕ

suchetana

ಭುವನೇಶ್ವರ: ಇಲ್ಲಿನ ರಾಜಭವನದ ಬಳಿಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲ್ ಬಂಕ್​ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಎಂಟು ಮಂದಿ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡವರನ್ನು ಕಟಕ್​ನ ಎಸ್​ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಉಳಿದವರಿಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕ್ಯಾಪಿಟಲ್ ಆಸ್ಪತ್ರೆಯ ನಿರ್ದೇಶಕ ಎಲ್.ಡಿ. ಸಾಹು ತಿಳಿಸಿದ್ದಾರೆ.

ಇದರ ಭೀಕರತೆ ಎಷ್ಟಿತ್ತೆಂದರೆ ಸುತ್ತಮುತ್ತಲಿನ ಮನೆಯಲ್ಲಿ ಇರುವವರಿಗೆ ಇಡೀ ಕಟ್ಟಡವೇ ಅಲ್ಲಾಡಿದಂತೆ ಭಾಸವಾಗಿದೆ. ಈ ಪೆಟ್ರೋಲ್​ ಬಂಕ್​ ಜನನಿಭಿಡ ಪ್ರದೇಶದಲ್ಲಿ ಇರುವ ಹಿನ್ನೆಲೆಯಲ್ಲಿ ಸುತ್ತಲೂ ಕಟ್ಟೆಚ್ಚರ ವಹಿಸಲಾಗಿದೆ.

ಮೂರು ಅಗ್ನಿಶಾಮಕ ದಳಗಳು ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.ಘಟನೆಗೆ ನಿಖರ ಕಾರಣವೇನು ಎಂದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಬೆಂಕಿಯು ಪೆಟ್ರೋಲ್ ಮತ್ತು ಡೀಸೆಲ್ ಇರುವ ಇನ್ನೆರಡು ಟ್ಯಾಂಕ್​ಗಳಿಗೆ ಹರಡದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎರಡು ಟ್ಯಾಂಕರ್​ಗಳಿಂದ ಇಂಧನವನ್ನು ಹೊರಹಾಕಲು ತಕ್ಷಣ ಕ್ರಮ ಕೈಗೊಳ್ಳುವಂತೆ ಐಒಸಿಎಲ್ ಗೆ ಸೂಚಿಸಲಾಗಿದೆ ಎಂದಿದ್ದಾರೆ.

ಇದೇ ವೇಳೆ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.