ನ್ಯೂಸ್

ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಬೈಕ್‌ನ ಟ್ರಯಲ್‌ ನೋಡುವುದಾಗಿ ಕೊಂಡೊಯ್ದು ಎಸ್ಕೇಪ್‌ ಆದ ಬಾಲಕ!

ವಿಜಯನಗರ: ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದ ಬೈಕ್‌ನ ಟ್ರಯಲ್‌ ನೋಡುವುದಾಗಿ ಹೇಳಿ ಅದರೊಂದಿಗೆ ಎಸ್ಕೇಪ್‌ ಆಗಿದ್ದ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ನ.21 ರಂದು ಸುಮಂತ ಎಂಬುವವರು ಓಎಲ್‌ಎಕ್ಸ್‌ನಲ್ಲಿ ತಮ್ಮ ಬೈಕ್‌ ಅನ್ನು 1.70 ಲಕ್ಷ ರೂಪಾಯಿಗೆ ಮಾರಾಟಕ್ಕೆ ಇಟ್ಟಿದ್ದರು. ಅದನ್ನು ನೋಡಿದ ಬಾಲಕ, ತಾನು ಈ ಬೈಕ್‌ ಖರೀದಿಸುವುದಾಗಿ ವಿಳಾಸ ಪಡೆದು ಸುಮಂತ ಅವರ ಮನೆಗೆ ಬಂದಿದ್ದ. ಬೈಕ್‌ ತುಂಬಾ ಚೆನ್ನಾಗಿದ್ದು, ಇದಕ್ಕೆ ಎರಡು ಲಕ್ಷ ರೂಪಾಯಿ ಕೊಡುವುದಾಗಿ ನಂಬಿಸಿದ್ದ.

ನಂತರ ಅದರ ಟ್ರಯಲ್‌ ನೋಡುವುದಾಗಿ ಹೇಳಿ ಬೈಕ್‌ ಸಹಿತ ಪರಾರಿಯಾಗಿದ್ದ. ಎಷ್ಟು ಹೊತ್ತಾದರೂ ಆತ ಬರದದ್ದನ್ನು ನೋಡಿ ಅನುಮಾನಗೊಂಡ ಸುಮಂತ್‌ ಅವರು ತಾವು ಮೋಸ ಹೋಗಿರುವುದು ತಿಳಿದು ಪೊಲೀಸರಲ್ಲಿ ದೂರು ದಾಖಲು ಮಾಡಿದರು.

ಹೊಸಪೇಟೆ ಪಟ್ಟಣ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕನಿಗಾಗಿ ಜಾಲ ಬೀಸಿದ್ದರು. ಒಂದು ವಾರದ ಬಳಿಕ ಅಂತೂ ಬಾಲಕ ಬೈಕ್‌ ಸಹಿತ ಸಿಕ್ಕಿಬಿದ್ದಿದ್ದಾನೆ. (ದಿಗ್ವಿಜಯ ನ್ಯೂಸ್‌)