More

    ನಂದಿನಿ ಪ್ಯಾಕೆಟ್‌ನಲ್ಲಿ ಕಾಣಿಸಿಕೊಳ್ತೀರೋ ಈ ವ್ಯಕ್ತಿ ಯಾರು? ಶತಮಾನ ಪೂರೈಸಿದ ‘ಕ್ಷೀರಕ್ರಾಂತಿ ಪಿತಾಮಹ’ನ ಕುತೂಹಲ ಕಥನ…

    ನವದೆಹಲಿ: ಕಳೆದೆರಡು ದಿನಗಳಿಂದ ನಂದಿನಿ ಹಾಲಿನ ಪ್ಯಾಕೆಟ್‌ ಗಮನಿಸಿರುವಿರಾದರೆ ಅದರಲ್ಲೊಬ್ಬ ವ್ಯಕ್ತಿಯ ಚಿತ್ರವನ್ನು ನೀವು ನೋಡಿರಬಹುದು. ಅಲ್ಲಿಯೇ ಅವರ ಹೆಸರು ಇದ್ದರೂ ಇವರ‍್ಯಾರು ಎಂದು ಕೆಲವರು ಪ್ರಶ್ನೆ ಮಾಡಿಕೊಂಡಿದ್ದರೆ, ಇನ್ನು ಹಲವರು ಅದರತ್ತ ಗಮನಿಸಿದೆಯೂ ಇರಬಹುದು.

    ಆದರೆ ಇಂದು ಮನೆಮನೆಗೂ ನಂದಿನಿಯೆಂಬ ಹಾಲನ್ನು ನೀಡುತ್ತಾ, ಇಡೀ ದೇಶದಲ್ಲಿಯೇ ಕ್ಷೀರಕ್ರಾಂತಿ ಮಾಡಿರುವ ಪಿತಾಮಹ ಡಾ.ವರ್ಗೀಸ್ ಕುರಿಯನ್ ಅವರೇ ಎಂಬುದು ನಿಮಗೆ ಗೊತ್ತೆ? ‘ಅಮುಲ್ ದಿ ಟೇಸ್ಟ್ ಆಫ್ ಇಂಡಿಯಾ…’ ಎಂಬ ಜಾಹೀರಾತು ಹಲವರ ಬಾಯಲ್ಲಿ ಇಂದಿಗೂ ನಲಿಯುತ್ತಲೇ ಇದೆ. ಇದರ ನಿರ್ಮಾತೃರೇ ‘ಕ್ಷೀರ ಕ್ರಾಂತಿ ಪಿತಾಮಹʼ ಎಂದು ಕರೆಯಲ್ಪಡುವ ಈ ಕುರಿಯನ್‌. 1921ರಲ್ಲಿ ಇವರು ಹುಟ್ಟಿದ್ದು ಇದೀಗ ಅವರ ಜನ್ಮಶತಮಾನೋತ್ಸವ.

    ನವೆಂಬರ್‌ 26 ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ‘ರಾಷ್ಟ್ರೀಯ ಹಾಲು ದಿನʼ ಎಂದು ಆಚರಿಸಲಾಗಿತ್ತು. ಇವರ ಅಮೋಘ ಸೇವೆಯನ್ನು ಗುರುತಿಸುವ ಸಲುವಾಗಿ ಪ್ರತಿದಿನವೂ ಅವರ ಭಾವಚಿತ್ರವನ್ನು ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಛಾಪಿಸಲಾಗುತ್ತಿದೆ.

    ಹಾಗಿದ್ದರೆ ಇವರು ಯಾರು? ಹಾಲು ಉ‌ತ್ಪಾದನೆ ಮಾಡಿದ್ದು ಹೇಗೆ? ಇಲ್ಲಿದೆ ಅವರ ಕುರಿತ ಪರಿಚಯ
    ವರ್ಗೀಸ್ ಕುರಿಯನ್ ಕೇರಳದ ಕೋಯಿಕ್ಕೋಡ್‌ನಲ್ಲಿ 1921 ನವೆಂಬರ್ 26ರಂದು ಜನಿಸಿದರು. ಮದ್ರಾಸ್ ಲೊಯೋಲಾ ಕಾಲೇಜಿನಲ್ಲಿ ಭೌತವಿಜ್ಞಾನದಲ್ಲಿ ಪದವಿ ಪಡೆದ ಇವರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಜೆಮ್‌ಷೆಡ್‌ಪುರದ ಟಾಟಾ ಸ್ಟೀಲ್ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿ ನಂತರ ಸ್ಕಾಲರ್‌ಷಿಪ್‌ ಪಡೆದು ಅಮೆರಿಕದಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್‌ನಲ್ಲಿ ಎಂಎಸ್ಸಿಪದವಿ ಪಡೆದರು.

    ಇವರು ಅಮೆರಿಕದಿಂದ ಭಾರತಕ್ಕೆ ಮರಳಿದ್ದು 1949ರಂದು. ಗುಜರಾತಿನ ಕೈರಾ ಜಿಲ್ಲೆಯ ಆನಂದ್ ಎಂಬಲ್ಲಿ ಐದು ವರ್ಷ ಡೈರಿ ಆಫೀಸರ್ ಆಗಿ ಕರ್ತವ್ಯನಿರ್ವಹಿಸುವ ಸಮಯದಲ್ಲಿ ಇಲ್ಲಿನ ಹೈನುಗಾರರು ಹಾಲು ಉತ್ಪಾದಕರಿಂದ ಶೋಷಣೆ ಅನುಭವಿಸೋದನ್ನು ಕಂಡು ಮನನೊಂದುಕೊಂಡರು. ಅಲ್ಲಿಯೇ ಸಂಕಲ್ಪವೊಂದನ್ನು ಇವರು ಮಾಡಿಯೇ ಬಿಟ್ಟರು.

    ಸಹಕಾರಿ ಸಂಘಗಳ ಮೂಲಕ ಜನರನ್ನು ಸಂಘಟಿಸುತ್ತಿದ್ದ ತ್ರಿಭುವನ್ ದಾಸ್ ಪಟೇಲ್ ಅವರನ್ನು ಅನುಸರಿಸಿದ ಕುರಿಯನ್‌, ಉದ್ಯೋಗ ಬಿಟ್ಟೇಬಿಟ್ಟರು. ಅಲ್ಲಿಂದ ಆನಂದ್‌ನಲ್ಲಿ ಇರುವ ಹೈನುಗಾರರನ್ನು ಒಟ್ಟುಗೂಡಿಸಿದರು. ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿದರು. ಕ್ರಮೇಣ ಇದು ‘ಅಮುಲ್’ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರು ಪಡೆಯಿತು. ಇದರಿಂದ 10 ಲಕ್ಷಕ್ಕೂ ಅಧಿಕ ರೈತರು ನೆಲೆ ಕಂಡುಕೊಂಡರು.

    1970ರಲ್ಲಿ ಆಪರೇಷನ್ ಫ್ಲಡ್ ಕಾರ್ಯಕ್ರಮ ಆಯೋಜಿಸಿ, ದೇಶಾದ್ಯಂತ ಇರುವ ಹಾಲಿನ ಒಕ್ಕೂಟಗಳನ್ನು ಒಟ್ಟುಗೂಡಿಸಿದರು. ಹೈನುಗಾರರು ಹಾಗೂ ಗ್ರಾಹಕರ ನಡುವಿನ ನೇರ ವಹಿವಾಟಿಗೆ ಅನುಕೂಲ ಕಲ್ಪಿಸಿದರು. ಈ ಮೂಲಕ ಅಮುಲ್ ದೇಶಾದ್ಯಂತ ಕ್ರಾಂತಿ ಮಾಡಿತು. ಅಂದಿನಿಂದ ಇಂದಿನವರೆಗೂ ಅಮುಲ್‌ ಹಾಗೂ ನಂದಿನಿಯ ವಿವಿಧ ಪ್ರಾಡಕ್ಟ್‌ಗಳು ಮನೆಮನೆ ಮಾತಾಗಿದ್ದು, ನಿತ್ಯವೂ ಇದರ ಅನಿವಾರ್ಯತೆ ಸೃಷ್ಟಿಯಾಗಿದೆ.

    ದೇಶದಲ್ಲಿ ಎಮ್ಮೆ ಹಾಲು ಹಾಗೂ ಹಾಲಿನ ಪುಡಿಯನ್ನು ಮೊದಲ ಬಾರಿಗೆ ಪರಿಚಯಿಸಿದವರು ಕೂಡ ಇವರೇ. ಇವರ ಈ ಕಾರ್ಯಕ್ಕೆ ಪದ್ಮಶ್ರೀ (1965), ಪದ್ಮಭೂಷಣ (1966), ಪದ್ಮವಿಭೂಷಣ (1999), ವಿಶ್ವ ಆಹಾರ ಪ್ರಶಸ್ತಿ (1989) ರಾಮನ್ ಮ್ಯಾಗ್ನೇಸ್ ಪ್ರಶಸ್ತಿ (1963 )ಸೇರಿದಂತೆ ಅನೇಕ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts