ನ್ಯೂಸ್

ದಾನ ಮಾಡಿಕೊಟ್ಟ ಆಸ್ತಿಯನ್ನು ಹಿಂದೆ ಪಡೆಯಬಹುದೇ?

ಪ್ರಶ್ನೆ: ನಮ್ಮ ತಂದೆಯ ಅಜ್ಜಿ ನಮ್ಮ ತಂದೆಗೆ ಒಂದು ಎಕರೆ ಜಮೀನನ್ನು ವಿಲ್ ಮಾಡಿದ್ದರು. ನಮ್ಮ ತಂದೆ ತಾಯಿಗೆ ನಾವು ಇಬ್ಬರು ಮಕ್ಕಳು. ನಾನು ಮತ್ತು ನನ್ನ ಅಣ್ಣ. ಈ ಆಸ್ತಿಯನ್ನು ನಮ್ಮ ತಂದೆ ನನಗೆ 2013ರಲ್ಲಿ ದಾನಪತ್ರ ಮಾಡಿಕೊಟ್ಟಿದ್ದಾರೆ. ಖಾತೆ ಪಹಣಿ ನನ್ನ ಹೆಸರಿಗೇ ಇದೆ. ನನ್ನ ಅಣ್ಣ ಮದುವೆಯಾಗಿ ಹೋದವನು ನಮ್ಮ ತಾಯಿ ತೀರಿಕೊಂಡಾಗ ಕರ್ಮ ಮಾಡಲು ಮಾತ್ರ ಬಂದಿರುತ್ತಾನೆ. ನಾನೇ ನಮ್ಮ ತಂದೆ ತಾಯಿಯನ್ನು ನೋಡಿಕೊಂಡಿದ್ದು. ಈಗ ನನ್ನ ಅಣ್ಣ ತನಗೂ ಆ ಆಸ್ತಿ ಬೇಕು ಎನ್ನುತ್ತಿದ್ದಾನೆ. ನನ್ನ ತಂದೆಯೂ ಮೋಸ ಮಾಡಿ ಬರಸಿಕೊಂಡಿದ್ದಾಳೆ ಎನ್ನುತ್ತಿದ್ದಾರೆ. ನಮ್ಮ ತಂದೆಗೆ ಬೇರೆ ಪಿತ್ರಾರ್ಜಿತ ಆಸ್ತಿಯೂ ಇದೆ. ಈಗ ನನಗೆ ದಾನ ಬಂದಿರುವ ಆಸ್ತಿಯನ್ನು ನಾನು ಕಳೆದುಕೊಳ್ಳುತ್ತೇನೆಯೇ?

ಉತ್ತರ:ನೀವು ಹೆದರ ಬೇಕಾಗಿಲ್ಲ. ನಿಮ್ಮ ತಂದೆಗೆ ಅವರ ಅಜ್ಜಿಯಿಂದ ವಿಲ್ ಮೂಲಕ ಬಂದ ಆಸ್ತಿ ಅವರ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ಅವರು ಹೇಗೆ ಬೇಕಾದರೂ ವಿಲೇವಾರಿ ಮಾಡಬಹುದು.

ಅವರು ನಿಮಗೆ 2013ರಲ್ಲಿ ದಾನಪತ್ರ ಮಾಡಿ ನೋಂದಣಿ ಮಾಡಿದ್ದರೆ ನೀವು ಚಿಂತಿಸಬೇಕಾಗಿಲ್ಲ. ರೆವಿನ್ಯೂ ದಾಖಲೆಗಳೂ ನಿಮ್ಮ ಹೆಸರಿಗೇ ಇವೆ. ದಾನ ಪತ್ರವನ್ನು ರದ್ದು ಮಾಡಲು ಅವರು ಮೂರು ವರ್ಷದ ಒಳಗೆ ದಾವೆ ಹಾಕಬೇಕಿತ್ತು. ಹಾಗೆ ಅವರು ಹಾಕಿಲ್ಲ. ಈಗ ಒಂದು ವೇಳೆ ನಿಮ್ಮ ಮೇಲೆ ಮೋಸದ ಆರೋಪ ಮಾಡಿ ದಾವೆ ಹಾಕಿದರೆ ನೀವು ದಾವೆಯನ್ನು ಎದುರಿಸ ಬಹುದು. ನೀವು ಮೋಸ ಮಾಡಿಲ್ಲ ಎನ್ನುವುದಾದರೆ, ಹೆದರಬೇಕಾಗಿಲ್ಲ. ನಿಮ್ಮ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿಯೂ ನಿಮಗೆ ಭಾಗ ಇರುತ್ತದೆ. ನಿಮ್ಮ ಅಣ್ಣ ಅಥವಾ ನಿಮ್ಮ ತಂದೆ ದಾವೆ ಹಾಕಿದರೆ, ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ . ಅಲ್ಲಿ ರಾಜೀ ಸೂತ್ರಕ್ಕೆ ಬಂದರೆ ,ನೀವೆಲ್ಲಾ ಕೂತು ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.