ನ್ಯೂಸ್

ಗಂಡ ವಿಚಾರಣೆಗೆ ಬರದೇ ಡಿವೋರ್ಸ್​ ಅರ್ಜಿ ವಜಾ ಆದ್ರೆ ಮತ್ತೆ ಹಾಕ್ಬೋದಾ?

suchetana

ಪ್ರಶ್ನೆ: ನನ್ನ ಮದುವೆಯಾಗಿ ಹನ್ನೊಂದು ವರ್ಷಗಳು ಆಗಿವೆ. ನನ್ನ ಗಂಡ ತುಂಬಾ ಹಿಂಸೆ ಕೊಡುತ್ತಿದ್ದರು. ಅದನ್ನು ತಡೆಯಲಾಗದೇ ನಾನು ಅವರನ್ನು ಬಿಟ್ಟು ಬೇರೆ ಊರಿಗೆ ಬಂದೆ. ಅವರಿವರು ಒಪ್ಪಿಸಿ , ವಿಚ್ಛೇದನ ಪಡೆಯಲು ಏರ್ಪಾಟು ಮಾಡಿದರು. ಇಬ್ಬರೂ ಸೇರಿ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿದೆವು. ಆದರೆ ಕಡೆಯದಿನ ನನ್ನ ಪತಿ ನ್ಯಾಯಾಲಯಕ್ಕೆ ಬರದೇ ಓಡಿಹೋದರು. ಇದರಿಂದ ಕೇಸು ವಜಾ ಆಯಿತು.

ಸುಮಾರು ಏಳು ವರ್ಷಗಳಾಗಿದೆ. ಇದಾದ ಮೇಲೆ ಈಗ ನನ್ನ ಗಂಡ ಕುಡಿದು ಬಂದು ನನ್ನನ್ನು ಕೆಟ್ಟ ಕೆಟ್ಟ ಮಾತುಗಳಿಂದ ಬಯ್ಯುವುದು ನಾನು ಕೆಲಸ ಮಾಡುವ ಕಡೆ ಬಂದು ಕಿರುಚಾಡುವುದು ಎಲ್ಲ ಮಾಡುತ್ತಿದ್ದಾರೆ. ಒಂದು ಸಲ ವಿಚ್ಛೇದನದ ಅರ್ಜಿ ವಜಾ ಆದರೆ ನಾನು ಮತ್ತೆ ವಿಚ್ಛೇದನ ಪಡೆಯಲು ಆಗುವುದಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ . ಹಳೆಯ ಕೇಸನ್ನೇ ಮತ್ತೆ ನಾನು ಮುಂದುವರೆಸಲು ಸಾಧ್ಯವೇ ?ದಯವಿಟ್ಟು ಕಾನೂನು ತಿಳಿಸಿಕೊಡಿ.

ಉತ್ತರ: ನೀವು ಹೆದರ ಬೇಕಾಗಿಲ್ಲ,ಈ ಹಿಂದೆ ನೀವಿಬ್ಬರೂ ಸೇರಿ ವಿಚ್ಛೇದನಕ್ಕೆ ಹಾಕಿದ್ದ ಪ್ರಕರಣ, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಇರುವ ಒಂದು ಕಾನೂನು ಕ್ರಮ. ಈ ರೀತಿಯ ಪ್ರಕರಣ ಸಲ್ಲಿಸಿದಾಗ, ಪ್ರಕರಣ ಸಲ್ಲಿಸಿದ ಆರುತಿಂಗಳ ನಂತರ ಹದಿನೆಂಟು ತಿಂಗಳ ಒಳಗೆ ವಿಚ್ಛೇದನದ ಆದೇಶವನ್ನು ಸಾಮಾನ್ಯವಾಗಿ ನ್ಯಾಯಾಲಯ ಕೊಡುತ್ತದೆ. ಆದರೆ ಆದೇಶ ಮಾಡುವ ದಿನದವರೆಗೂ ವಿಚ್ಛೇದನಕ್ಕೆ ಇಬ್ಬರ ಒಪ್ಪಿಗೆಯೂ ಇರಲೇ ಬೇಕು.

ನಿಮ್ಮ ವಿಷಯದಲ್ಲಿ ನಿಮ್ಮ ಪತಿ ಬರದೇ ಇದ್ದುದರಿಂದ ಪ್ರಕರಣವನ್ನು ವಜಾ ಮಾಡಿರುವುದು ಸರಿಯಾಗಿಯೇ ಇದೆ. ಈಗ ಅದೇ ಪ್ರಕರಣವನ್ನು ನೀವು ಏಳು ವರ್ಷಗಳ ನಂತರ ಮುಂದುವರೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಬೇಕಿದ್ದರೆ ನಿಮ್ಮ ಪತಿ ಒಪ್ಪಿದರೆ ಈಗ ಮತ್ತೆ ನೀವಿಬ್ಬರೂ ಸೇರಿ ಮತ್ತೊಮ್ಮೆ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಪ್ರಕರಣ ದಾಖಲಿಸಬಹುದು.

ಆದರೆ ನಿಮ್ಮ ಪತಿ ಅದಕ್ಕೆ ಒಪ್ಪುವುದಿಲ್ಲ ಎನ್ನುವುದಾದರೆ, ನೀವು ಪ್ರತ್ಯೇಕವಾಗಿ ವಿಚ್ಛೇದನಕ್ಕೆ ಪ್ರಕರಣವನ್ನು ದಾಖಲಿಸಿ. ನಿಮಗೆ ನಿಮ್ಮ ಪತಿಯಿಂದ ಆಗಿರುವ ಕ್ರೂರತೆಯನ್ನು ವಿವರಿಸಿ. ನಿಮಗೆ ವಿಚ್ಛೇದನ ಸಿಗಬಹುದು. ಒಮ್ಮೆ ಪರಸ್ಪರ ಒಪ್ಪಿಗೆಯಿಂದ ಸಲ್ಲಿಸಿದ ವಿಚ್ಛೇದನದ ಪ್ರಕರಣ ವಜಾ ಆದ ಮಾತ್ರಕ್ಕೆ ನೀವು ಮತ್ತೆ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಯಾವ ತೊಡಕೂ ಇಲ್ಲ.

ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)