ನವದೆಹಲಿ: ಹಿಂದೂ ದೇವರನ್ನು ಅವಹೇಳನ ಮಾಡಿದವರ ವಿರುದ್ಧ ಪ್ರತಿಭಟಿಸಲು ಹೋಗಿ ಕಾಂಗ್ರೆಸ್ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಅವರು ಈಗ ಸುಪ್ರೀಂಕೋರ್ಟ್ನಿಂದಾಗಿ ನಿರಾಳರಾಗಿದ್ದಾರೆ.
ಪ್ರವಾದಿ ಮೊಹಮ್ಮದ್ ಕುರಿತು ಇವರು ನೀಡಿರುವ ಹೇಳಿಕೆ ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಸಂಚಲನ ಸೃಷ್ಟಿಸಿ ಹಿಂಸಾಚಾರ ಸ್ವರೂಪ ಪಡೆದುಕೊಂಡಿತ್ತು. ಇವರ ವಿರುದ್ಧ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳಲ್ಲಿ ದೂರು ದಾಖಲಾಗಿದ್ದು, ಅದರ ಅನ್ವಯ ನೂಪುರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿಕೊಳ್ಳಲಾಗಿದೆ.
ಇವುಗಳನ್ನೆಲ್ಲಾ ಪ್ರಶ್ನಿಸಿ ನೂಪುರ್ ಶರ್ಮಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಆರೋಪಗಳು ಒಂದೇ ಸ್ವರೂಪದ್ದಿದ್ದು ಮತ್ತು ಒಂದೇ ಸೆಕ್ಷನ್‌ಗಳ ಅಡಿಯಲ್ಲಿ ಇರುವುದರಿಂದ ದೆಹಲಿಯಲ್ಲಿ ದಾಖಲಾದ ಪ್ರಕರಣಗಳ ಜತೆಗೆ ಸೇರಿಸುವಂತೆ ಅವರು ಕೋರಿದ್ದರು ಜತೆಗೆ ಎಫ್‌ಐಆರ್ ಸಂಬಂಧ ತಮ್ಮನ್ನು ಬಂಧಿಸುವ ಸಾಧ್ಯತೆ ಇದ್ದು, ಅದಕ್ಕೆ ತಡೆ ನೀಡುವಂತೆ ಅವರು ಕೋರಿದ್ದರು.
ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ನೂಪುರ್ ಶರ್ಮಾ ವಿರುದ್ಧ ಸದ್ಯ ದಾಖಲಾಗಿರುವ ಎಫ್ಐಆರ್ಗಳಿಗೆ ಸಂಬಂಧಿಸಿ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡಿರುವ ಕೋರ್ಟ್, ಅಲ್ಲಿಯವರೆಗೆ ನೂಪುರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಹೇಳಿದೆ.
ಈ ಮಧ್ಯೆ ನೂಪುರ್ ಶರ್ಮಾ ಅವರು ಇನ್ನೊಂದು ಅರ್ಜಿ ಸಲ್ಲಿಸಿದ್ದು, ಕ್ಷುಲ್ಲಕ ಶಕ್ತಿಗಳು ತಮಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ಹಾಕುತ್ತಿವೆ, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಿದ್ದಾರೆ. ಈ ಹಿಂದೆ ಇದೇ ಬೇಡಿಕೆ ಇಟ್ಟು ಅರ್ಜಿ ಸಲ್ಲಿಸಿದಾಗ ಅದರ ವಿಚಾರಣೆ ನಡೆಸಿದ್ದ ಕೋರ್ಟ್ ಉಲ್ಟಾ ನೂಪುರ್ ಶರ್ಮಾ ಅವರನ್ನೇ ತರಾಟೆಗೆ ತೆಗೆದುಕೊಂಡು ಇಡೀ ದೇಶದ ಕ್ಷಮೆ ಕೋರಬೇಕು ಎಂದು ಹೇಳಿತ್ತು.