ನ್ಯೂಸ್

ಪಬ್​ಜಿಯಲ್ಲಿ ಸೋಲು- ಸ್ನೇಹಿತರ ಅಪಹಾಸ್ಯ ತಾಳದೇ ಕಾಂಗ್ರೆಸ್​ ಮುಖಂಡನ ಪುತ್ರ ಆತ್ಮಹತ್ಯೆ!

ಉದಯಪುರ (ಆಂಧ್ರಪ್ರದೇಶ): ಪಬ್​ಜಿ ಆಟ ಭಾರತದಲ್ಲಿ ಬ್ಯಾನ್​ ಆಗಿದ್ದರೂ, ಅದನ್ನು ಬ್ಯಾನ್​ ಆಗುವ ಮೊದಲೇ ಡೌನ್​ಲೋಡ್​ ಮಾಡಿಕೊಂಡವರು ಆಡಲು ಅವಕಾಶ ಇರುವುದರಿಂದ ಅನಾಹುತಗಳು ಸಂಭವಿಸುತ್ತಲೇ ಇವೆ. ಇದೇ ಆಟ ಈಗ ಕಾಂಗ್ರೆಸ್​ ಮುಖಂಡನ ಪುತ್ರನೊಬ್ಬನ ಬಲಿ ಪಡೆದಿದೆ.

ಪಬ್​ಜಿ ಆಡುವ ಸಮಯದಲ್ಲಿ ಆತ ಅದರಲ್ಲಿ ಸೋತಿದ್ದ. ಇದಕ್ಕೆ ಆತನ ಸ್ನೇಹಿತರು ಗೇಲಿ ಮಾಡಿದ್ದರು. ಇದರಿಂದ ನೊಂದುಕೊಂಡ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ, ಉದಯಪುರದ ಜಿಲ್ಲಾ ಪರಿಷತ್​ ಸದಸ್ಯ ಶಾಂತಿರಾಜ್​ ಎನ್ನುವವರ 16 ವರ್ಷ ಮಗ ಇಂಥದ್ದೊಂದು ದುರಂತ ಸಾವು ಕಂಡಿದ್ದಾನೆ.

ಮನೆಯಲ್ಲಿ ಇದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಸದಾ ಪಬ್​ಜಿ ಆಟವಾಡುತ್ತಿದ್ದ. ಸ್ನೇಹಿತರ ಜತೆ ಆಡುವಾಗ ಆತ ಸೋತಿದ್ದಾನೆ. ಅದಕ್ಕೆ ಸ್ನೇಹಿತರು ಅಪಹಾಸ್ಯ ಮಾಡಿದ್ದರು ಎನ್ನಲಾಗಿದೆ.

ಕೂಡಲೇ ಕೋಣೆಗೆ ಹೋದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ನಡೆದಿದೆ.