ನ್ಯೂಸ್

ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಕೈದಿಗಳು: ತಿಹಾರ್‌ ಜೈಲಿನಲ್ಲಿ ಭಾರಿ ಅನಾಹುತ- ಕಾರಣ ನಿಗೂಢ

ನವದೆಹಲಿ: ಐವರು ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೆಹಲಿಯ ತಿಹಾರ್‌ ಜೈಲಿನಲ್ಲಿ ನಡೆದಿದೆ. ಹರಿತವಾದ ಆಯುಧಗಳಿಂದ ತಮ್ಮನ್ನು ತಾವೇ ಗಾಯಗೊಳಿಸಿಕೊಂಡು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಜನವರಿ 3 ರಂದು ತಿಹಾರ್ ಜೈಲಿನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೊದಲು ಹರಿತವಾದ ಆಯುಧದಿಂದ ಗಾಯ ಮಾಡಿಕೊಂಡು ತಮ್ಮ ವಾರ್ಡ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ. ಹೀಗೆ ಮಾಡುತ್ತಿದ್ದಂತೆಯೇ ಭಾರಿ ಕೋಲಾಹಲವೇ ನಡೆದುಹೋಯ್ತು.

ಕೂಡಲೇ ಅಲ್ಲಿಯ ಸಿಬ್ಬಂದಿ ದೌಡಾಯಿಸಿ ಕೈದಿಗಳನ್ನು ಆಸ್ಪತ್ರೆಗೆ ಕರೆದಕೊಂಡು ಹೋಗಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು, ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಲರೂ ಆಸ್ಪತ್ರೆಗೆ ಹೋಗುವ ನೆಪದಲ್ಲಿ ಪರಾರಿಯಾಗಲು ಏನಾದರೂ ಯೋಜನೆ ರೂಪಿಸಿದ್ದಾರಾ ಅಥವಾ ಜೈಲಿನಲ್ಲಿ ಖಿನ್ನತೆಗೆ ಜಾರಿ ಈ ರೀತಿ ಮಾಡಿಕೊಂಡಿದ್ದಾರಾ ಎಂಬ ಬಗ್ಗೆ ಇದುವೆಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ ಅಧಿಕಾರಿಗಳು.