ಚಂಡೀಗಢ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕಳೆದ ತಿಂಗಳು ಶಾಕ್ ನೀಡಿತ್ತು. ಘನ ಹಾಗೂ ದ್ರವ ತ್ಯಾಜ್ಯದ ಉತ್ಪಾದನೆ ಹಾಗೂ ಸಂಸ್ಕರಣೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ ಇರುವುದಕ್ಕೆ ಸರ್ಕಾರಕ್ಕೆ ಮೂರುವರೆ ಸಾವಿರ ಕೋಟಿ ರೂ. ದಂಡ ವಿಧಿಸಿತ್ತು. ಇದೀಗ ಪಂಜಾಬ್ಗೆ ಎನ್‌ಜಿಟಿ ದೊಡ್ಡ ಶಾಕ್ ನೀಡಿದ್ದು 2000 ಕೋಟಿ ದಂಡ ವಿಧಿಸಿದೆ!
ಪಂಜಾಬ್‌ನಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ. ಜನರಿಗಾಗಿ ಮಾಲಿನ್ಯ ಮುಕ್ತ ವಾತಾವರಣ ಕಲ್ಪಿಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಅದನ್ನು ಬಿಟ್ಟು ಈ ರೀತಿಯ ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಈ ಕುರಿತಾಗಿ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಪಂಜಾಬ್ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಭಾರಿ ದಂಡ ವಿಧಿಸಲಾಗಿದೆ ಎಂದು ಕೋರ್ಟ್ ಹೇಳಿದೆ.
ಪಶ್ಚಿಮ ಬಂಗಾಳದ ನಗರ ಪ್ರದೇಶಗಳಲ್ಲಿ ದಿನಕ್ಕೆ 2,758 ಮಿಲಿಯನ್ ಲೀಟರ್ ಕೊಳಚೆ ಉತ್ಪಾದನೆಯಾಗುತ್ತಿದೆ. ಈ ಪೈಕಿ 1,505 ಮಿಲಿಯನ್ ಲೀಟರ್‌ನಷ್ಟು ಕೊಳಚೆ ಸಂಸ್ಕರಿಸುವ ಸಾಮರ್ಥ್ಯವಿದೆ. ಆದರೂ ದಿನಕ್ಕೆ 1,268 ಲೀಟರ್ ನಷ್ಟು ತ್ಯಾಜ್ಯವನ್ನು ಮಾತ್ರವೇ ಸಂಸ್ಕರಿಸಲಾಗುತ್ತಿದ್ದು, ಉಳಿದ 1,490 ಮಿಲಿಯನ್ ಲೀಟರ್ ನಷ್ಟು ತ್ಯಾಜ್ಯ ಹಾಗೆಯೇ ಉಳಿಸುತ್ತಿದೆ ಎಂದು ಕಿಡಿ ಕಾರಿದ್ದ ಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರಕ್ಕೆ ದಂಡ ವಿಧಿಸಿತ್ತು. ಅದಕ್ಕೂ ಮುನ್ನ ಉತ್ತರ ಪ್ರದೇಶ ಸರ್ಕಾರಕ್ಕೂ 100 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಘನ ಮತ್ತು ದ್ರವ ತ್ಯಾಜ್ಯದ ದುರುಪಯೋಗಕ್ಕಾಗಿ 3,000 ಕೋಟಿ ರೂಪಾಯಿಯನ್ನು ರಾಜಸ್ಥಾನ ಸರ್ಕಾರಕ್ಕೂ ವಿಧಿಸಿದೆ. (ಏಜೆನ್ಸೀಸ್)