ಶ್ರೀನಗರ: ಆಸ್ಪತ್ರೆಯಲ್ಲಿ ವೈದ್ಯರು ಸತ್ತೇಹೋಗಿದ್ದಾರೆ ಎಂದು ಘೋಷಿಸುವ ವ್ಯಕ್ತಿಗಳು ನಂತರ ಜೀವಂತವಾಗುವ ಘಟನೆಗಳು ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ನಲ್ಲಿ ನಡೆದಿದೆ.
ನವಜಾತ ಶಿಶು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದು, ಅಂತ್ಯಸಂಸ್ಕಾರದ ಸಮಯದಲ್ಲಿ ಮಗು ಜೀವಂತವಾಗಿರುವ ಘಟನೆ ಇದು.
ಬಷರತ್ ಅಹಮ್ಮದ್ ಅವರ ಮಗು ಹೀಗೆ ಪವಾಡದಿಂದ ಮರುಜನ್ಮ ಪಡೆದಿದೆ. ಅವರ ಪತ್ನಿಯ ಹೆರಿಗೆ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿತ್ತು. ಆದರೆ ಹುಟ್ಟುತ್ತಲೇ ಮಗು ಸತ್ತುಹೋಗಿದೆ ಎಂದು ವೈದ್ಯರು ಘೋಷಿಸಿದ್ದರು. ಇದರಿಂದ ಕುಟುಂಬಸ್ಥರು ಮಗುವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದಿದ್ದಾರೆ.
ಸಮಾಧಿ ಮಾಡಲು ಎಲ್ಲಾ ರೀತಿಯ ತಯಾರಿ ನಡೆಯುತ್ತಿದ್ದಾಗ, ಕುಟುಂಬದ ಸದಸ್ಯರು ಮಗು ಅಲ್ಲಾಡುವುದನ್ನು ನೋಡಿದ್ದಾರೆ ಹಾಗೂ ಅದು ಕಣ್ಣುಬಿಡಲು ಶುರುಮಾಡಿದೆ. ಕೂಡಲೇ ಬೆಚ್ಚಿಬಿದ್ದ ಅವರು, ಮಗುವನ್ನು ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಗು ಜೀವಂತ ಇರುವುದಾಗಿ ವೈದ್ಯರು ಹೇಳಿದ್ದಾರೆ.
ಇಷ್ಟಾಗುತ್ತಿದ್ದಂತೆಯೇ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕೊಪಗೊಂಡ ಮಗುವಿನ ಕುಟುಂಬಸ್ಥರು ಆಸ್ಪತ್ರೆ ಎದುರು ಭಾರಿ ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಅವರನ್ನು ಶಾಂತಗೊಳಿಸಿದ್ದಾರೆ. ಮಗುವನ್ನು ಸರಿಯಾಗಿ ಪರೀಕ್ಷೆ ಮಾಡದೇ ಹೀಗೆ ಮೃತಪಟ್ಟಿರು ವರದಿ ನೀಡಿದ ಕಾರಣಕ್ಕೆ ಇಬ್ಬರು ಆಸ್ಪತ್ರೆಯ ವೈದ್ಯರನ್ನು ಅಮಾನತುಗೊಳಿಸಲಾಗಿದೆ.