ನ್ಯೂಸ್

ಸರ್​... ಸರ್​... ಇಲ್ಲೊಬ್ಬ ಅಂಕಲ್​ ಮರ ಕಡೀತಾ ಇದ್ದಾರೆ ಎಂದು ಕಾಲ್ ಮಾಡಿದ ಬಾಲಕ- ಬಿತ್ತು ಭಾರಿ ದಂಡ!

suchetana

ಹೈದರಾಬಾದ್: ಮನೆಗಳನ್ನು ನಿರ್ಮಾಣ ಮಾಡುವಾಗ ಮರಗಳು ಅಡ್ಡಬರುವುದು ಸಹಜ. ಆದರೆ ಆ ಮರಗಳನ್ನು ಮನಸೋಇಚ್ಛೆ ಕಡಿಯುವಂತಿಲ್ಲ. ಅದಕ್ಕೆ ಅಧಿಕಾರಿಗಳ ಅನುಮತಿ ಬೇಕು, ಕೆಲವೊಂದು ಷರತ್ತುಗಳನ್ನು ವಿಧಿಸಿದ ಮೇಲೆ ಮರ ಕಡಿಯಲು ಅನುಮತಿ ನೀಡಲಾಗುತ್ತದೆ.

ಆದರೆ ಎಷ್ಟೋ ಕಡೆಗಳಲ್ಲಿ ಈ ನಿಯಮ ಮೀರಿ ಕಟ್ಟಡ ನಿರ್ಮಾಣದ ವೇಳೆ ಬೇಕಾಬಿಟ್ಟೆ ಮರ ಕಡಿಯಲಾಗುತ್ತದೆ. ಇದನ್ನು ನೋಡಿದವರು ಕೂಡ ನಮಗ್ಯಾಕೆ ಬೇಕು ಉಸಾಬರಿ ಎಂದು ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ 8ನೇ ಕ್ಲಾಸ್​ ಬಾಲಕ ಸುಮ್ಮನಾಗದೇ ಅಧಿಕಾರಿಗಳಿಗೆ ಕರೆ ಮಾಡಿ, ಮರ ಕಡಿಯುವವನಿಗೆ ಭಾರಿ ದಂಡ ಹಾಕಿಸಿ ಇದೀಗ ಸುದ್ದಿಯಾಗಿದ್ದಾನೆ, ಮಾತ್ರವಲ್ಲದೇ ಮರ ಕಡಿಯುವವರಿಗೆ ಹಾಗೂ ಮರ ಕಡಿಯುವುದನ್ನು ನೋಡಿಯೂ ಸುಮ್ಮನೇ ಇರುವವರಿಗೆ ಈ ಬಾಲಕ ಬುದ್ಧಿ ಕಲಿಸಿದ್ದಾನೆ.

ಈ ಘಟನೆ ನಡೆದಿರುವುದು ಹೈದರಾಬಾದ್​ನಲ್ಲಿ. ಹೊಸ ಮನೆ ನಿರ್ಮಾಣಕ್ಕೆ 40 ವರ್ಷಗಳಿಂದ ಬೆಳೆದು ನಿಂತಿರುವ ಬೇವಿನ ಮರ ಅಡ್ಡಿಯಾಗುತ್ತಿತ್ತು ಎಂದು ಬೇವಿನ ಮರ ಕತ್ತರಿಸಲಾಗುತ್ತಿತ್ತು. ಜಿ ಸಂತೋಷ್ ರೆಡ್ಡಿ ಎನ್ನುವವರು ಅರಣ್ಯ ಇಲಾಖೆಗೆ ಮಾಹಿತಿ ನೀಡದೇ ಈ ಕ್ರಮ ತೆಗೆದುಕೊಂಡಿದ್ದರು.

ಮರ ಕತ್ತರಿಸುವುದನ್ನು ಗಮನಿಸಿದ 8ನೇ ಕ್ಲಾಸ್​ ವಿದ್ಯಾರ್ಥಿಯೊಬ್ಬ ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಸರ್​ ಸರ್​ ಇಲ್ಲೊಬ್ಬ ಅಂಕಲ್​ ಮರ ಕಡಿಯುತ್ತಿದ್ದಾರೆ ಎಂದು ದೂರು ನೀಡಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೆಡ್ಡಿಯವರಿಗೆ 62 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದಾರೆ.

ಮರ ಕಡಿಯುತ್ತಿರುವ ವಿಷಯವನ್ನು ಸಂಬಂಧ ಪಟ್ಟ ಇಲಾಖೆಗೆ ತಿಳಿಸಿದ ಬಾಲಕನ ಕೆಲಸಕ್ಕೆ ಅರಣ್ಯ ಇಲಾಖೆ ಹಾಗೂ ಸುತ್ತಮುತ್ತಲಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.