ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕೋಟ್ಯಂತರ ರೂಪಾಯಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಇದಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಇದೇ ಪ್ರಕರಣ ಮತ್ತಷ್ಟು ಕಾಂಗ್ರೆಸ್ ನಾಯಕರಿಗೆ ಉರುಳಾಗಿದ್ದು, ತೆಲಂಗಾಣದ ಐವರು ಕಾಂಗ್ರೆಸ್ ನಾಯಕರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ಜಾರಿ ಮಾಡಿದೆ.
ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ, ಸಿಕಂದರಾಬಾದ್‌ನ ಮಾಜಿ ಸಂಸದ ಪಿ ಅಂಜನ್‌ಕುಮಾರ್ ಯಾದವ್ ಮತ್ತು ರಾಜ್ಯದ ಮಾಜಿ ಸಚಿವರಾದ ಜೆ ಗೀತಾ ರೆಡ್ಡಿ, ಎಂಡಿ ಅಲಿ ಶಬ್ಬೀರ್ ಮತ್ತು ಪಿ ಸುದರ್ಶನ್ ರೆಡ್ಡಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇವರೆಲ್ಲರೂ ಬರುವ ಅಕ್ಟೋಬರ್ನಲ್ಲಿ ವಿಚಾರಣೆಗೆ ಹಾಜರು ಆಗಬೇಕಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭಾಗಿಯಾಗಿರುವ ಕಂಪೆನಿಗಳ ಖಾತೆಗಳಿಗೆ ಐವರು ತೆಲಂಗಾಣ ಕಾಂಗ್ರೆಸ್ ನಾಯಕರು ಭಾರಿ ಮೊತ್ತದ ಹಣವನ್ನು ವರ್ಗಾಯಿಸಿದ್ದಾರೆ ಎಂದು ಇಡಿ ಶಂಕಿಸಿದೆ. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?
ಜವಾಹರಲಾಲ್ ನೆಹರು ಮತ್ತು ಇತರ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು ಇದರ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.
2010ರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಯಂಗ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದ್ದರು. ಈ ಕಂಪೆನಿಯು ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್), ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಷೇರುಗಳನ್ನು ಖರೀದಿ ಮಾಡುವಲ್ಲಿ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದೆ. ಇದರಲ್ಲಿ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು 2012ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ನೀಡಿದ್ದರು.
ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2 ಸಾವಿರ ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್)