ನ್ಯೂಸ್

ಮಾರುಕಟ್ಟೆ ಪ್ರವೇಶಕ್ಕೆ ಐದು ರೂಪಾಯಿ ಶುಲ್ಕ- ಒಂದು ಗಂಟೆಗಿಂತ ಹೆಚ್ಚಿಗೆ ಇದ್ದರೆ 500 ರೂ ದಂಡ!

ನಾಸಿಕ್​ (ಮಹಾರಾಷ್ಟ್ರ): ಕರೊನಾ ಈಗ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಮಹಾರಾಷ್ಟ್ರವಂತೂ ಅಕ್ಷರಶಃ ಕರೊನಾದಿಂದ ಮತ್ತೊಮ್ಮೆ ನಲುಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲೀಗ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ.

ಮಾರುಕಟ್ಟೆಗೆ ಹೋದರೆ ಜನರು ಅಲ್ಲಿಂದ ವಾಪಸ್​ ಬರಲು ವಿಳಂಬ ಮಾಡುತ್ತಾರೆ, ಅಲ್ಲಿಯೇ ಜನಜಂಗುಳಿ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕರೊನಾ ವೈರಸ್​ ಹರಡಲು ಮಾರುಕಟ್ಟೆ ಪ್ರದೇಶ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ ಎನ್ನುವ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಇದೀಗ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.

ಅದರಲ್ಲಿಯೂ ನಾಸಿಕ್ ನಗರ ಪೊಲೀಸರು ಮತ್ತು ಮಹಾನಗರ ಪಾಲಿಕೆ ನಾಸಿಕ್​ ನಗರಕ್ಕೆ ಸಂಬಂಧಿಸಿದಂತೆ ಒಂದು ಆದೇಶ ಹೊರಡಿಸಿದೆ. ಇಲ್ಲಿರುವ ಮಾರುಕಟ್ಟೆ ಪ್ರವೇಶಿಸಲು ಕಡ್ಡಾಯವಾಗಿ ಐದು ರೂಪಾಯಿ ಶುಲ್ಕವನ್ನು ಪ್ರತಿಯೊಬ್ಬರೂ ನೀಡಬೇಕು. ಹೀಗೆ ಪ್ರವೇಶಿಸುವಾಗ ಅವರಿಗೆ ಟೈಮಿಂಗ್ಸ್​ ಇರುವ ಚೀಟಿ ನೀಡಲಾಗುತ್ತದೆ.

ಇದರ ಅವಧಿ ಕೇವಲ ಒಂದು ಗಂಟೆ. ಒಂದು ವೇಳೆ ಒಂದು ಗಂಟೆಗಿಂತ ಹೆಚ್ಚಿಗೆ ಮಾರುಕಟ್ಟೆಯ ಕೆಲಸಲ್ಲಿ ತಲ್ಲೀನವಾಗಿ ಬಿಟ್ಟರೆ 500 ರೂಪಾಯಿ ದಂಡವನ್ನು ಕಟ್ಟಬೇಕಾಗುತ್ತದೆ.

ಇದೀಗ ಇಲ್ಲಿ ಭಾರಿ ವಿರೋಧವನ್ನು ಸೃಷ್ಟಿಮಾಡಿದೆ. ಜನರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಒಳ್ಳೆಯ ಮಾತಿನಲ್ಲಿ ಹೇಳಿದರೆ ಜನರು ಕೇಳದ ಹಿನ್ನೆಲೆಯಲ್ಲಿ ಇಂಥ ಕ್ರಮ ಅನಿವಾರ್ಯವಾಗಿದೆ. ಹೀಗೆ ಮಾಡಿದ ಕಾರಣ, ಜನರು ಒಂದೆಡೆ ಗುಂಪು ಸೇರುವುದು, ಅನಗತ್ಯವಾಗಿ ಹರಟೆ ಹೊಡೆಯುವುದನ್ನು ತಪ್ಪಿಸಿದಂತಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಈ ಯೋಜನೆ ಯಶಸ್ವಿಯಾದರೆ ಇದು ಎಲ್ಲೆಡೆ ಜಾರಿಯಾದರೂ ಆಶ್ಚರ್ಯವಿಲ್ಲ.