ಮುಂಬೈ: ಕಳೆದೊಂದು ವರ್ಷದಿಂದ ಬಾಲಿವುಡ್ ನಟ ಸೋನು ಸೂದ್ ಬಹಳ ಪ್ರಚಾರದಲ್ಲಿ ಇದ್ದಾರೆ. ಕರೊನಾ ಒಂದನೆಯ ಅಲೆಯಿಂದ ಹಿಡಿದು ಇಲ್ಲಿಯವರೆಗೂ ಹಲವಾರು ಮಂದಿಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿರುವ ಇವರ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ.
ಆಂಧ್ರಪ್ರದೇಶದಲ್ಲಿ ಎರಡು ಆಕ್ಸಿಜನ್ ಪ್ಲಾಂಟ್ ಸ್ಥಾಪನೆ, ಚೀನಾ ಮತ್ತು ಫ್ರಾನ್ಸ್‌ನಿಂದ ಆಮ್ಲಜನಕ ಸಾಂದ್ರಕ ತರುತ್ತೇನೆ ಎಂದು ಹೇಳಿರುವ ಕಾರಣ ಆಂಧ್ರದಲ್ಲಿಯೂ ಇವರ ಅಭಿಮಾನಿ ಬಳಗ ಹೆಚ್ಚಿದೆ. ಇದೇ ಕಾರಣಕ್ಕೆ ಮಟನ್ ಷಾಪ್ ಮಾಲೀಕರೊಬ್ಬರು ತಮ್ಮ ಕನಯ್ಯ ಮಟನ್ ಸ್ಟಾಲ್ ಅಂಗಡಿಗೆ ನಟ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಎಂಬ ಹೆಸರಿನಲ್ಲಿ ಸೋನು ಸೂದ್ ಫೋಟೋ ಹಾಕಿ ದೊಡ್ಡ ಬ್ಯಾನರ್ ಹಾಕಿದ್ದಾರೆ.
ಇದು ಜಾಲತಾಣದಲ್ಲಿ ವೈರಲ್ ಆಗಿದ್ದು, ಸೋನು ಸೂದ್ ಕೂಡ ನೋಡಿದ್ದಾರೆ. ಇದನ್ನು ತಿಳಿದ ಅವರು ಅಚ್ಚರಿ ಪಟ್ಟಿದ್ದು, ಅರೆರೆ... ನಾನು ಶುದ್ಧ ಶಾಖಾಹಾರಿನಪ್ಪಾ.. ನನ್ನ ಹೆಸರಲ್ಲಿ ಮಟನ್ ಷಾಪಾ ಎಂದು ಟ್ವಿಟರ್‌ನಲ್ಲಿ ಹಾಸ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ. ಜತೆಗೆ ಇಲ್ಲಿ ಸಸ್ಯಹಾರಿ ವಸ್ತುಗಳನ್ನು ಮಾರುವುದಿದ್ದರೆ ನಾನು ಸಹಾಯ ಮಾಡಬಲ್ಲೆ ಎಂದಿದ್ದಾರೆ. ಇದೀಗ ಸಕತ್ ವೈರಲ್ ಆಗಿದ್ದು, ಸಹಸ್ರಾರು ಮಂದಿ ಕಮೆಂಟ್ ಮೂಲಕ ತಮಾಷೆಯಾಗಿರುವ ಪ್ರತಿಕ್ರಿಯೆ ನೀಡುತ್ತಿದ್ದಾರೆ.