ನ್ಯೂಸ್

ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್: ವಿಮಾನದ ಮೂಲಕ ಆಸ್ಪತ್ರೆಗೆ ದಾಖಲು

ಭೋಪಾಲ್​: ಕೆಲ ತಿಂಗಳ ಹಿಂದೆ ರೆಟಿನಾ ಹಿಂಭಾಗದಲ್ಲಿ ಸೋಂಕು ಉಂಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಭೋಪಾಲದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪುನಃ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇವರ ಆರೋಗ್ಯದಲ್ಲಿ ತೀವ್ರವಾಗಿ ಏರುಪೇರಾಗಿರುವ ಕುರಿತು ವರದಿಯಾಗಿದೆ. ವಿಮಾನದ ಮೂಲಕ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಭಾಗಿಯಾಗಿದ್ದ ಸಂಸದೆಗೆ ಉಸಿರಾಟದ ಸಮಸ್ಯೆಯಾಗಿದೆ. ಖುರ್ಚಿಯಿಂದ ಏಕಾಏಕಿ ಕುಸಿದು ಬಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಜ್ಞಾ ಸಿಂಗ್ ಅವರು ಕೆಲ ತಿಂಗಳುಗಳಿಂದ ಏಮ್ಸ್​ ಆಸ್ಪತ್ರೆಯಲ್ಲಿ ರೆಟಿನಾ ಸಂಬಂಧಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಅದಕ್ಕೆಂದೇ ಏಮ್ಸ್​ಗೆ ತೆರಳಿದ್ದರು. ಆದರೆ ಆ ಸಮಯದಲ್ಲಿ ತಪಾಸಣೆ ನಡೆಸಿರುವ ವೈದ್ಯರು, ಪ್ರಜ್ಞಾ ಅವರಿಗೆ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದರಿಂದ ಕೆಲ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ನಂತರ ಅಲ್ಲಿಂದ ಚಿಕಿತ್ಸೆ ಪಡೆದು ಅವರನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿತ್ತು. ಈಗ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಅವರ ಕಚೇರಿ ಮಾಹಿತಿ ನೀಡಿದೆ.