ಅಲೀಗಢ: ಮದುಮಗಳೊಬ್ಬಳಿಗೆ ಉತ್ತರ ಪ್ರದೇಶದ ಬಿಜೆಪಿ ಸಂಸದರೊಬ್ಬರು ನೀಡಿರುವ ಗಿಫ್ಟ್ ಇದೀಗ ಭಾರಿ ಸುದ್ದಿಯಾಗುತ್ತಿದೆ. ಇದುವರೆಗೆ ಯಾರೂ ನೀಡದ ಅದ್ಭುತ ಉಡುಗೊರೆ ಇದಾಗಿದೆ.
ಅಲೀಗಢದ ಸತೀಶ್ ಗೌತಮ್ ಅವರೇ ಉಡುಗೊರೆ ಕೊಟ್ಟಿರುವ ಸಂಸದ. ಅಲಿಘರ್‌ನ ಖೈರ್ ತಹಸಿಲ್ ಪ್ರದೇಶದ ಕಸಿಸೊ ಗ್ರಾಮದ ಪ್ರಿಯಾಂಕಾ ಶರ್ಮಾ ಎನ್ನುವ ವಧುವಿಗೆ ಈ ಉಡುಗೊರೆ ನೀಡಲಾಗಿದೆ. ಅಷ್ಟಕ್ಕೂ ಅವರು ನೀಡಿರುವ ಉಡುಗೊರೆ ಎಂದರೆ ವಧುವಿನ ಮನೆಯ ಬಳಿ 120 ಮೀಟರ್ ಸುಸಜ್ಜಿತ ರಸ್ತೆಯನ್ನು ನಿರ್ಮಿಸಿಕೊಟ್ಟಿರುವುದು. ಅದೂ 35 ದಿನಗಳಲ್ಲಿ!
ಈ ಉಡುಗೊರೆ ಏಕೆ?
ಸಂಸದ ಸತೀಶ್ ಗೌತಮ್ ಅವರು ತಮ್ಮ ಪರಿಚಯಸ್ಥರಾದ ನವೀನ್ ಅವರ ಮಗಳು ಪ್ರಿಯಾಂಕಾ ಶರ್ಮಾ ಮದುವೆಯಾಗಿತ್ತು. ಆದರೆ ಕಾರಣಾಂತರಗಳಿಂದ ಮದುವೆಗೆ ಹೋಗಲು ಸತೀಶ್ ಅವರಿಗೆ ಸಾಧ್ಯವಾಗಿರಲಿಲ್ಲ. ನಂತರ ಉಡುಗೊರೆ ಕೊಡುವ ಸಂಬಂಧ ಕಸಿಸೊ ಗ್ರಾಮಕ್ಕೆ ತೆರಳಿದ್ದರು. ಅವರು ವಾಸಿಸುತ್ತಿದ್ದ ಗ್ರಾಮದ ರಸ್ತೆಗಳ ಸ್ಥಿತಿ ಭಾರಿ ಕೆಟ್ಟದ್ದಾಗಿತ್ತು. ಕೆಸರಿನಿಂದ ತುಂಬಿತ್ತು.
ಸಂಸದರು ಉಡುಗೊರೆ ಕೊಡಲು ಮುಂದಾದಾಗ ಪ್ರಿಯಾಂಕಾ ಅವರು ನನಗೆ ಈ ಉಡುಗೊರೆ ಬೇಡ, ಕೊಡುವುದೇ ಆಗಿದ್ದರೆ, ನಮ್ಮ ಗ್ರಾಮದ ಜನರಿಗೆ ಅನುಕೂಲ ಆಗುವಂತೆ ರಸ್ತೆ ನಿರ್ಮಿಸಿ ಕೊಡಿ ಎಂದು ಕೋರಿದ್ದರು. ಅವರ ಮನವಿಗೆ ಸಂಸದ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದರು. ಅದರಂತೆ 35 ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ.
ರಸ್ತೆ ನಿರ್ಮಾಣವಾದ ಬಳಿಕ ನವೀನ್ ಶರ್ಮಾ ಅವರ ಪುತ್ರ ದೀಪಾಂಶು ಹಾಗೂ ಸೊಸೆ ಪ್ರಿಯಾಂಕಾ ಅವರು ಸಂಸದರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬಿಡುವಿಲ್ಲದ ಕಾರಣ ಸಂಸದ ಸತೀಶ್ ಗೌತಮ್ ದೀಪಾಂಶು ಅವರ ಮದುವೆಗೆ ಆಗಮಿಸಲು ಸಾಧ್ಯವಾಗಲಿಲ್ಲ. ಮದುವೆಯ ನಂತರ ಗ್ರಾಮಕ್ಕೆ ಆಗಮಿಸಿ ಆಶೀರ್ವದಿಸಿದ್ದರು. ಈಗ ರಸ್ತೆ ನಿರ್ಮಿಸಿ ಕೊಟ್ಟಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ಸಂತೋಷದಲ್ಲಿ ತೇಲಾಡುತ್ತಿದೆ. ದೇವಸ್ಥಾನಕ್ಕೆ ಹೋಗಲು ಪರದಾಡುವ ಸ್ಥಿತಿ ಇತ್ತು. ಇದೀಗ ಎಲ್ಲರೂ ಸಂಪೂರ್ಣ ಖುಷಿಯಿಂದ ಇದ್ದಾರೆ ಎಂದಿದ್ದಾರೆ.