ಮುಂಬೈ: ಸಾಮಾಜಿಕ ಜಾಲತಾಣ ಎಂದರೆ ಬಹುತೇಕ ಮಂದಿಗೆ ಅಚ್ಚುಮೆಚ್ಚು, ಆದರೂ ಇದನ್ನು ಬೈಯ್ಯುವವರೇ ಹೆಚ್ಚು, ಆದರೆ ಕೆಲವು ಸಲ ಇದೇ ಜಾಲತಾಣಗಳು ಅಚ್ಚರಿ ಎನಿಸುವಂಥ ಘಟನೆಗಳಿಗೂ ಕಾರಣೀಕರ್ತವಾಗುತ್ತವೆ, ಅಸಾಧ್ಯವಾದದ್ದನ್ನೂ ಸಾಧ್ಯ ಮಾಡುತ್ತದೆ ಎನ್ನುವುದಕ್ಕೆ ಈ ಘಟನೆಯೂ ಒಂದು ಸಾಕ್ಷಿ.
20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಸತ್ತೇ ಹೋದಳು ಎಂದು ಕುಟುಂಬಸ್ಥರು ಭಾವಿಸಿದ್ದರೆ, ಆಕೆ ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದಲ್ಲಿ ಇರುವುದು ಕುಟುಂಬಸ್ಥರಿಗೆ ತಿಳಿದುಬಂದಿರುವ ಅಚ್ಚರಿಯ ಘಟನೆ ಇದು.
ಮುಂಬೈನ ನಿವಾಸಿ ಯಾಸ್ಮಿನ್ ಶೇಖ್ ಅವರ ತಾಯಿ ಹಮೀದಾ ಬಾನು ಅವರ ಕಥೆಯಿದು. 20 ವರ್ಷಗಳ ಹಿಂದೆ ದುಬೈಗೆ ಕೆಲಸ ಹುಡುಕಿ ಹೋದಾಕೆ ವಾಪಸ್ ಆಗಿರಲಿಲ್ಲ, ಕುಟುಂಬಸ್ಥರು ಹುಡುಕಿ ಹುಡುಕಿ ಸಾಕಾದರೂ ಆಕೆ ಸಿಕ್ಕಿರಲಿಲ್ಲ, ಇದರಿಂದ ಈಕೆ ಬದುಕಿರುವುದೇ ಸಂದೇಹ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಆದರೆ ಇದೀಗ ಅದೇ ಮಹಿಳೆ ಪಾಕಿಸ್ತಾನದಲ್ಲಿ ಇರುವುದು ಸಾಮಾಜಿಕ ಜಾಲತಾಣದಿಂದ ತಿಳಿದುಬಂದಿದೆ.
ಪಾಕಿಸ್ತಾನದ ಕುರಿತಾದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದ ಯಾಸ್ಮಿನ್ ಶೇಖ್ ಅವರಿಗೆ ಆ ವಿಡಿಯೋದಲ್ಲಿ ತಮ್ಮ ತಾಯಿಯನ್ನೇ ಹೋಲುವ ಮಹಿಳೆ ಕಂಡಿದ್ದಾರೆ. ನಂತರ ಅದು ತಮ್ಮ ತಾಯಿಯೇ ಎನ್ನುವುದು ಸ್ಪಷ್ಟವಾಗಿ ಇದರ ಬೆನ್ನತ್ತಿ ಹೋಗಿದ್ದಾರೆ ಯಾಸ್ಮಿನ್. ಕೊನೆಗೂ ಅವರು ತಮ್ಮ ತಾಯಿಯೇ ಎನ್ನುವುದು ತಿಳಿದು ಸಂತೋಷಕ್ಕೆ ಪಾರವೇ ಇಲ್ಲವಾಗಿದೆ.
ಘಟನೆಯ ಕುರಿತು ಯಾಸ್ಮಿನ್ ಹೇಳುವುದು ಹೀಗೆ: ನನ್ನ ತಾಯಿ ಹಮೀದಾ ಬಾನು 20 ವರ್ಷಗಳ ಹಿಂದೆ ಅಡುಗೆ ಕೆಲಸಕ್ಕಾಗಿ ದುಬೈಗೆ ಹೋಗಿದ್ದರು. ಆದರೆ ಆಕೆ ಹಿಂತಿರುಗಲಿಲ್ಲ. ಅವರು 2-4 ವರ್ಷಗಳ ಅವಧಿಗೆ ಆಗಾಗ್ಗೆ ಕತಾರ್‌ಗೆ ಹೋಗುತ್ತಿದ್ದರು. ಆಗೆಲ್ಲಾ ಹಿಂದಿರುತ್ತಿದ್ದರು. ಆದರೆ ಈ ಬಾರಿ ಆಕೆ ಏಜೆಂಟರ ಸಹಾಯದಿಂದ ಹೋಗಿದ್ದರು, ಹಿಂತಿರುಗಲಿಲ್ಲ.
ನಾವು ಆಕೆಯನ್ನು ಹುಡುಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಮ್ಮ ಬಳಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಅವರು ಸಿಗಲೇ ಇಲ್ಲ. ಕೆಲಸಕ್ಕೆಂದು ಕರೆದುಕೊಂಡು ಹೋಗಿರುವ ಏಜೆಂಟ್ ಕೂಡ ನಾಪತ್ತೆಯಾಗಿದ್ದ. ಹೇಗೋ ಕಷ್ಟಪಟ್ಟು ಆತನನ್ನು ಹುಡುಕಿ ಹೋದಾಗ ನನ್ನ ತಾಯಿ ನಮ್ಮನ್ನು ಭೇಟಿಯಾಗಲು ಅಥವಾ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದ, ಅವರು ಚೆನ್ನಾಗಿದ್ದಾರೆ ಎಂದು ನಮಗೆ ಭರವಸೆ ನೀಡಿದ್ದ. ಆದರೆ ತಾಯಿಯ ಬಗ್ಗೆ ಮಾತ್ರ ಕೊನೆಗೂ ಗೊತ್ತಾಗಲಿಲ್ಲ ಎಂದಿದ್ದಾರೆ.
ಈಗ ಸಾಮಾಜಿಕ ಜಾಲತಾಣದಿಂದ ಪವಾಡವೇ ಆಗಿದೆ. ಆಕೆಯನ್ನು ಆದಷ್ಟು ಬೇಗ ತರಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)
ವಿಡಿಯೋ ಇಲ್ಲಿದೆ ನೋಡಿ (ಕೃಪೆ Waliullah Maroof)