ನ್ಯೂಸ್

ಹಿಂದೂ ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಅಮೂಲ್ಯ ಎಂದು ಯೋಗಿಗೆ ಪತ್ರ ಬರೆದರಾ ಮೋದಿ ? ಸತ್ಯ ಏನು?

suchetana

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಅಯೋಧ್ಯೆಯಲ್ಲಿ ಇತ್ತೀಚೆಗೆ ನಡೆದ ರಾಮ ಮಂದಿರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದಿರುವ ಪತ್ರ ಇದು ಎಂಬಂತೆ ಬಿಂಬಿಸಲಾಗಿದೆ.

“ಹಿಂದೂ ರಾಷ್ಟ್ರಕ್ಕೆ ನಿಮ್ಮ ಅಮೂಲ್ಯ ಕೊಡುಗೆಗಾಗಿ ನಿಮ್ಮನ್ನು ಮತ್ತು ನಿಮ್ಮ ತಂಡವನ್ನು ಅಭಿನಂದಿಸುವ ಮೂಲಕ ನಾನು ಈ ಪತ್ರವನ್ನು ಪ್ರಾರಂಭಿಸುತ್ತಿದ್ದೇನೆ. ಹಿಂದೂ ರಾಷ್ಟ್ರ ಮಾಡಲು ರಾಮಮಂದಿರದ ಮೂಲಕ ಸಾಧಿಸಿರುವ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿಂದೂಗಳು ಯಾವಾಗಲೂ ನಿಮಗೆ ಮತ್ತು ನಿಮ್ಮ ತಂಡಕ್ಕೆ ಕೃತಜ್ಞರಾಗಿರಬೇಕು, ಇದು ಹಿಂದೂ ರಾಷ್ಟ್ರಕ್ಕೆ ಹೊಸ ಇತಿಹಾಸವನ್ನು ನೀಡುತ್ತದೆ ಎಂದು ಪತ್ರದಲ್ಲಿ ಬರೆದಿದೆ ಎನ್ನಲಾಗಿದ್ದು, ಇದನ್ನೇ ಜಾಲತಾಣಗಳಲ್ಲಿ ಶೇರ್‌ ಮಾಡಲಾಗುತ್ತಿದೆ.

ರಾಮ ದೇವಾಲಯದ ಆರಂಭಿಕ ನಿರ್ಮಾಣಕ್ಕಾಗಿ 50 ಕೋಟಿ ಕಳುಹಿಸಲಾಗುತ್ತಿದೆ ಎಂದೂ ಈ ಪತ್ರದಲ್ಲಿ ಇದೆ ಎಂಬಂತೆ ತೋರಿಸಲಾಗಿದೆ.

ಆದರೆ ಪ್ರೆಸ್‌ ಇನ್‌ಫಾರ್ಮೇಷನ್‌ ಬ್ಯೂರೊ (ಪಿಬಿಐ) ನಡೆಸಿರುವ ಫ್ಯಾಕ್ಟ್‌ ಚೆಕ್‌ನಲ್ಲಿ ಈ ಪತ್ರ ನಕಲಿ ಎಂಬುದು ಸ್ಪಷ್ಟವಾಗಿದೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ಪ್ರಧಾನಿ ಮೋದಿಯವರು ಬರೆದಿದ್ದಾರೆ ಎನ್ನಲಾದ ಪತ್ರವನ್ನು ಶೇರ್‌ ಮಾಡಿದ್ದು, ಅದು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಇದು ಬಳಕೆದಾರರೇ ಸೃಷ್ಟಿಸಿರುವ ನಕಲಿ ಪತ್ರ. ಇದಕ್ಕೂ ಪ್ರಧಾನಿ ಮೋದಿಯವರಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದುಬಂದಿದೆ.

ರಾಮಮಂದಿರದ ಕುರಿತು ವಿವರಿಸಿದ ನಂತರ ಈ ಪತ್ರದಲ್ಲಿ 2022ರ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿ ಆದಿತ್ಯನಾಥ್ ಅವರನ್ನು ಹಾರೈಸಿದಂತೆ ಉಲ್ಲೇಖವಾಗಿದೆ. "ನಿಮ್ಮ ಭವಿಷ್ಯದ ಚುನಾವಣೆಗಳಿಗೆ ನಿಮಗೆ ಯಶಸ್ಸನ್ನು ಹಾರೈಸುತ್ತೇನೆ’ ಎಂದು ಬರೆಯಲಾಗಿದೆ.

ಆದರೆ ಇವೆಲ್ಲವೂ ಸುಳ್ಳು ಎನ್ನುವುದು ಫ್ಯಾಕ್ಟ್‌ಚೆಕ್‌ನಿಂದ ಸಾಬೀತಾಗಿದೆ.