ನ್ಯೂಸ್

ಕಾಶಿಯ ಕಾರ್ಮಿಕರ ಕಾಣದ ನೋವಿಗೆ ಪ್ರಧಾನಿ ಮೋದಿ ಸ್ಪಂದನೆ- ಕೂಲಿಗಾರರ ಕಣ್ಣಲ್ಲಿ ಆನಂದಬಾಷ್ಪ

ವಾರಣಾಸಿ: ಕಾಶಿಯಲ್ಲಿ ವಿಶ್ವನಾಥ ಧಾಮ ಕಾರಿಡಾರ್​ ಮೊದಲ ಹಂತವನ್ನು ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಉದ್ಘಾಟನೆ ಮಾಡಿದಾಗಿನಿಂದ ಎಲ್ಲರ ದೃಷ್ಟಿ ಕಾಶಿಯತ್ತ ನೆಟ್ಟಿದೆ. ಇಡೀ ಕಾಶಿಯ ಪರಿಸರವೇ ಬದಲಾಗಿದ್ದು, ವಿಶ್ವವೇ ಬೆರಗುಗಣ್ಣುಗಳಿಂದ ನೋಡುವಂತೆ ನವಚೈತನ್ಯವನ್ನು ಕಾಶಿ ಪಡೆದುಕೊಂಡಿದೆ.

ಕಾಶಿಯಲ್ಲಿನ ಪುರಾತನ ನಗರ ಮತ್ತು ವಿಶ್ವನಾಥ ದೇವಾಲಯದ ವೈಭವ ಮತ್ತೆ ಮರುಕಳಿಸುವಂತೆ ಮಾಡಲಾಗುತ್ತಿದೆ. ಇಂಥದ್ದೊಂದು ನೂತನ ಮಾದರಿಯ ನಗರ ನಿರ್ಮಾಣ ಮಾಡಬೇಕೆಂದರೆ ಅದರಲ್ಲಿ ಕಾರ್ಮಿಕರ ಶ್ರಮವೇ ಪ್ರಮುಖವಾಗಿದ್ದರೂ, ಅವರನ್ನು ಅಷ್ಟಾಗಿ ಪರಿಗಣಿಸದವರೇ ಹೆಚ್ಚು. ಆದರೆ ಪ್ರಧಾನಿ ಮೋದಿಯವರು ಮಾತ್ರ ಹೀಗೆ ಮಾಡಲಿಲ್ಲ. ಕಾರ್ಮಿಕರ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಅವರು ಇದೀಗ ಮತ್ತೆ ಎಲ್ಲರೂ ತಮ್ಮತ್ತ ಅಚ್ಚರಿಯಿಂದ ದೃಷ್ಟಿಬೀರುವ ಕೆಲಸವೊಂದನ್ನು ಮಾಡಿದ್ದಾರೆ.

ಅದೇನೆಂದರೆ, ಕಾಶಿ ವಿಶ್ವನಾಥ ದೇಗುಲದ ಆವರಣದಲ್ಲಿ ಯಾರೊಬ್ಬರೂ ರಬ್ಬರ್​ ಅಥವಾ ಚರ್ಮದ ಚಪ್ಪಲಿ ಧರಿಸುವಂತಿಲ್ಲ. ಅರ್ಚಕರಾಗಲಿ, ದೇವರ ದರ್ಶನಕ್ಕೆ ಹೋಗುವ ಭಕ್ತರಾಗಲಿ, ಭದ್ರತಾ ಸಿಬ್ಬಂದಿಯೇ ಆಗಲಿ ಅಥವಾ ಸ್ವಚ್ಛತೆಗಾಗಿ ಹೋಗುವವರೇ ಆಗಲಿ, ಯಾರಿಗೂ ಇದನ್ನು ಧರಿಸಲು ಅವಕಾಶವಿಲ್ಲ. ಇದೇ ಕಾರಣಕ್ಕೆ ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಕಾರ್ಮಿಕರು ಬರಿಗಾಲಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

ಕಾರ್ಮಿಕರಿಗೆ ಇದು ಒಗ್ಗಿಹೋಗಿರಬಹುದು, ಬಿಸಿಲು, ಮಳೆ, ಚಳಿಯೆನ್ನದೇ ಅವರು ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಈಗ ಕಾಶಿಯಲ್ಲಿ ಭಯಂಕರ ಚಳಿ ಇರುವ ಕಾರಣ, ಚಪ್ಪಲಿ ಇಲ್ಲದೆಯೇ ಕೆಲಸ ಮಾಡುವುದು ಬಹು ಕಷ್ಟ ಎನ್ನುವುದನ್ನು ಅರಿತ ಪ್ರಧಾನಿ ಮೋದಿ, ಕಾರ್ಮಿಕರ ಕಷ್ಟವನ್ನು ಅರ್ಥ ಮಾಡಿಕೊಂಡು 100 ಜೊತೆ ಸೆಣಬಿನ ಪಾದರಕ್ಷೆಗಳನ್ನು ಕಾರ್ಮಿಕರಿಗಾಗಿ ಕಳಿಸಿಕೊಟ್ಟಿದ್ದಾರೆ.!

ಇದನ್ನು ಸ್ವೀಕರಿಸಿದ ಕಾರ್ಮಿಕರ ಕಣ್ಣುಗಳು ತುಂಬಿಬಂದಿದ್ದು, ಪ್ರಧಾನಿಯವರು ಸದಾ ತಾವೊಬ್ಬರು ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಾರೆ. ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಭಾವುಕರಾಗಿ ನುಡಿದಿದ್ದಾರೆ.

2019ರಲ್ಲಿ ಪ್ರಯಾಗ್​ರಾಜ್​​ನಲ್ಲಿ ನಡೆದಿದ್ದ ಕುಂಭಮೇಳದ ವೇಳೆ, ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದಪೂಜೆ ಮಾಡಿ, ನಂತರ ಅವರನ್ನು ಸನ್ಮಾನಿಸಿದ್ದರು. ಇತ್ತೀಚೆಗೆ ಕಾಶಿ ವಿಶ್ವನಾಥ ಧಾಮ ಕಾರಿಡಾರ್​ ಉದ್ಘಾಟನೆ ಮಾಡಲು ಹೋಗಿದ್ದಾಗ, ಅದರ ನಿರ್ಮಾಣ ಮಾಡಿದ್ದ ಕಾರ್ಮಿಕರೊಟ್ಟಿಗೆ ಕುಳಿತು ಊಟ ಮಾಡಿದ್ದರು. ಅಷ್ಟೇ ಅಲ್ಲ, ಅವರನ್ನೆಲ್ಲ ಒಂದೆಡೆ ಕೂರಿಸಿಕೊಂಡು ಪ್ರತಿಯೊಬ್ಬರ ಬಳಿಯೂ ಹೋಗಿ, ಅವರ ಮೇಲೆ ಗುಲಾಬಿ ಹೂವುಗಳ ಎಸಳುಗಳನ್ನು ಚೆಲ್ಲುವ ಮೂಲಕ ಗೌರವ ಸಲ್ಲಿಸಿದ್ದರು.