ನ್ಯೂಸ್

ಮಾಡೆಲ್‌, ವಕೀಲೆ, ವರದಿಗಾರ್ತಿಯಾಗಿ ಖ್ಯಾತಿ ಪಡೆದ ‘ಅಮೆರಿಕ ಸುಂದರಿ’ ಆತ್ಮಹತ್ಯೆ? ತಲ್ಲಣಗೊಂಡ ಫ್ಯಾಷನ್‌ ಲೋಕ!

ನ್ಯೂಯಾರ್ಕ್‌: ಮಾಡೆಲ್‌, ವಕೀಲೆ, ವರದಿಗಾರ್ತಿಯಾಗಿ ಖ್ಯಾತಿ ಪಡೆದು 2019ರಲ್ಲಿ ಮಿಸ್‌ ಯುಎಸ್‌ಎ (ಅಮೆರಿಕ ಸುಂದರಿ) ಆಗಿಯೂ ಹೊರಹೊಮ್ಮಿದ್ದ ಚೆಸ್ಲಿ ಕ್ರಿಸ್ಟ್ 60ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಇನ್ನೂ ನಿಖರ ಮಾಹಿತಿ ಹೊರಬರಬೇಕಿದೆ.

1991ರಲ್ಲಿ ಜನಿಸಿದ್ದ ಚೆಸ್ಲಿ ಕ್ರಿಸ್ಟ್ ಫ್ಯಾಷನ್ ಲೋಕದಲ್ಲಿ ಅಪಾರ ಹೆಸರು ಮಾಡಿದ್ದರು. ಮಾತ್ರವಲ್ಲದೇ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನು ಪದವಿ ಪಡೆದು ವಕೀಲೆಯಾಗಿಯೂ ಖ್ಯಾತಿ ಪಡೆದವರು. ಅಮೆರಿಕದ ಎಕ್ಸ್‌ಟ್ರಾ ಟಿವಿ ವರದಿಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದ ಇವರು, 'ವೈಟ್ ಕಾಲರ್ ಗ್ಲಾಮ್' ಎಂಬ ಫ್ಯಾಷನ್​ ಬ್ಲಾಗ್​ ಸ್ಥಾಪಿಸಿ ಜಗದ್ವಿಖ್ಯಾತಿ ಗಳಿಸಿದ್ದರು.

ಫ್ಯಾಷನ್‌ ಜಗತ್ತಿನ ಹಲವರು ಆತ್ಮಹತ್ಯೆಯ ಹಾದಿ ತುಳಿಯುತ್ತಿರುವ ಹಿನ್ನೆಲೆಯಲ್ಲಿ, ಇಡೀ ಫ್ಯಾಷನ್‌ ಜಗತ್ತೀಗ ತಲ್ಲಣಗೊಂಡಿದೆ. 2021ರ ಮಿಸ್​ ಯೂನಿವರ್ಸ್ ಆಗಿರುವ ಭಾರತದ ಹರ್ನಾಜ್ ಸಂಧು ಚೆಸ್ಲಿ ಕ್ರಿಸ್ಟ್ ನಿಧನದಿಂದ ಆಘಾತವಾಗಿದೆ ಎಂದಿದ್ದಾರೆ. ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಕ್ರಿಸ್ಟ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹರ್ನಾಜ್‌ ಶೇರ್‌ ಮಾಡಿಕೊಂಡಿದ್ದಾರೆ.

"ಇದು ನಂಬಲಾಗದ ಸಂಗತಿಯಾಗಿದೆ, ನೀವು ಯಾವಾಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ರೆಸ್ಟ್​ ಇನ್​ ಪೀಸ್​ ಚೆಸ್ಲಿ" ಎಂದು ಬರೆದುಕೊಂಡಿದ್ದಾರೆ.