ನವದೆಹಲಿ: ಏರ್‌ಟೆಲ್ ಗ್ರಾಹಕರ ನಂಬರ್‌ಗಳಿಗೆ ಕನ್ನ ಹಾಕಿರುವ ಹ್ಯಾಕರ್‌ಗಳು, ಗ್ರಾಹಕರ ಪ್ರತಿಯೊಂದು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಇಂಟರ್ನೆಟ್ ಭದ್ರತಾ ಸಂಶೋಧಕರೊಬ್ಬರು ಬಹಿರಂಗಪಡಿಸಿದ್ದಾರೆ.
ಏರ್‌ಟೆಲ್‌ನ ಗ್ರಾಹಕರಾಗಿರುವ ಜನರ ಆಧಾರ್ ನಂಬರ್, ಗ್ರಾಹಕರ ವಿಳಾಸ, ಫೋನ್ ನಂಬರ್ ಅಷ್ಟೇ ಅಲ್ಲದೇ ಫೋನ್ ಮೂಲಕ ಹಂಚಿಕೆಯಾಗಿರುವ ಸಂಪೂರ್ಣ ಖಾಸಗಿ ಮಾಹಿತಿ ಸೋರಿಕೆಯಾಗಿದೆ ಎಂದು ಸಂಶೋಧಕ ರಾಜಶೇಖರ್ ರಾಜಾಹಾರಿಯಾ ಹೇಳಿದ್ದಾರೆ.
ಇಷ್ಟೇ ಅಲ್ಲದೇ, ಇವೆಲ್ಲ ಮಾಹಿತಿಗಳನ್ನು ಹ್ಯಾಕರ್ಸ್ ಮಾರಾಟ ಮಾಡಲು ಯತ್ನಿಸಿದರು ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ. ಇದನ್ನು ಪತ್ತೆಹಚ್ಚಿರುವ ರಾಜಶೇಖರ್ ಅವರು, ಈ ರೀತಿಯ ಮಾಹಿತಿಗಳನ್ನು ಕದ್ದು, ಏರ್‌ಟೆಲ್ ಕಂಪೆನಿಗೆ ಬೆದರಿಕೆ ಹಾಕಿದ್ದಾರೆ, ಅವರ ಬಳಿಯಿಂದ ಸುಮಾರು 3,500 ಬಿಟ್ಕಾಯಿನ್ ಹಣ ವಸೂಲಿಗೆ ಮುಂದಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಕ್ಕೆ ಜಗ್ಗದ ಕಂಪೆನಿ ಹಣ ನೀಡದಿದ್ದ ಕಾರಣ ಹ್ಯಾಕರ್‌ಗಳು ಎಲ್ಲಾ ಮಾಹಿತಿಯನ್ನು ವೆಬ್ಸೈಟ್ ಒಂದರಲ್ಲಿ ಮಾರಲು ಮುಂದಾಗಿದ್ದಾರೆ. ಆದರೆ ನಂತರ ಈ ವೆಬ್ಸೈಟ್ ಅನ್ನು ತೆಗೆದುಹಾಕಲಾಗಿದೆ ಎಂದಿದ್ದಾರೆ ರಾಜ್‌ಶೇಖರ್.
ಮೊಬೈಲ್ ಗ್ರಾಹಕರ ಮೇಲೆ ನಿಗಾವಹಿಸುವ ಸರ್ಕಾರಿ ಏಜೆನ್ಸಿಗಳ ಮುಖಾಂತರ ಇಂಥದ್ದೊಂದು ಸೋರಿಕೆ ಆಗಿದೆ ಎಂದು ಕೆಲವು ಮೂಲಗಳು ಸ್ಪಷ್ಟಪಡಿಸಿವೆ. ಜತೆಗೆ ಈ ರೀತಿ ಸೋರಿಕೆಯಾದ ಎಲ್ಲಾ ಮಾಹಿತಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಏರ್‌ಟೆಲ್ ಗ್ರಾಹಕರಿಗೆ ಸೇರಿದ್ದು ಎಂದು ಕೂಡ ಹೇಳಲಾತ್ತಿದೆ.
ಈ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಏರ್‌ಟೆಲ್ ಸಂಸ್ಥೆ, ಗ್ರಾಹಕರ ಖಾಸಗಿತನಕ್ಕೆ ನಾವು ಹೆಚ್ಚು ಒತ್ತು ಕೊಡುತ್ತಿದ್ದೇವೆ. ಅವರ ಎಲ್ಲಾ ಮಾಹಿತಿಗಳನ್ನು ಸುರಕ್ಷಿತವಾಗಿ ಇರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮ ಕಡೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಹೇಳಿದೆ. ಈ ಬಗ್ಗೆ ಸೂಕ್ತ ಅಧಿಕಾರಿಗಳಿಗೆ ಮಾಹಿತಿ ಸಹ ನೀಡಿದ್ದೇವೆ ಎಂದು ಹೇಳಿದೆ.