ಮೆಕ್ಸಿಕೋ: ಇನ್ನೇನು ತಾನು ಸಾಯುತ್ತೇನೆ ಎಂದು ತಿಳಿದಾಗ 99 ವರ್ಷದ ವೃದ್ಧೆಯೊಬ್ಬರು ಮಕ್ಕಳು, ಮೊಮ್ಮಕ್ಕಳನ್ನು ಕರೆದು ತನ್ನ ಕೊನೆಯ ಆಸೆ ಹೇಳಿದ್ದಾಳೆ. ಇದನ್ನು ಕೇಳಿ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಆದರೆ ಕೊನೆಗೂ ಆ ಆಸೆಯನ್ನು ಈಡೇರಿಸಿದ್ದಾರೆ!
ಅಷ್ಟಕ್ಕೂ ಕುಟುಂಬಸ್ಥರು ದಿಗಿಲುಗೊಳ್ಳುವಂಥ ಮಾಡಿದ ಅಜ್ಜಿಯ ಕೊನೆಯ ಆಸೆ ಏನು ಎಂದರೆ, ತನ್ನ ಸಮಾಧಿಯ ಮೇಲೆ ಎಷ್ಟು ಸಾಧ್ಯವೋ ಅಷ್ಟು, ಭಾರವಾದ ಮತ್ತು ಉದ್ದವಾಗಿರುವ ಪುರುಷನ ಶಿಶ್ನದ ಮಾದರಿಯನ್ನು ಅಳವಡಿಸಬೇಕು ಎಂಬುದು! ಈ ಆಸೆಯನ್ನು ಕೇಳಿ ಕುಟುಂಬದವರೆಲ್ಲಾ ಕಣ್ಕಣ್ ಬಿಟ್ಟರೂ, ಅಜ್ಜಿಯ ಆಸೆಯನ್ನು ನೆರವೇರಿಸಿ ಐದೂವರೆ ಅಡಿ ಉದ್ದ ಮತ್ತು 600 ಪೌಂಡ್ ತೂಕದ ಶಿಶ್ನದ ಮಾದರಿಯನ್ನು ಅಳವಡಿಸಿದ್ದಾರೆ!
ಇಂಥದ್ದೊಂದು ವಿಚಿತ್ರ ಬೇಡಿಕೆ ಇಟ್ಟವಳು, 99 ವರ್ಷದ ಮೆಕ್ಸಿಕನ್ ಅಜ್ಜಿ. ಈಕೆಯ ಹೆಸರು ಕತ್ರಿನಾ ಒರ್ಡುನಾ ಪೆರೆಜ್. ಇದು ಪೌರುಷತ್ವದ ಸಂಕೇತವಾಗಿದ್ದು, ಅಜ್ಜಿಯ ಆಸೆಯಂತೆ ಆಕೆಯ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಇದನ್ನು ಪ್ರೀತಿ ಮತ್ತು ಜೀವನ ಸಂತೋಷದ ಸಂಕೇತವಾಗಿ ಸ್ಥಾಪಿಸಲಾಗಿದೆ ಎಂದು ಅಜ್ಜಿಯ ಮೊಮ್ಮಗ ಅಲ್ವಾರೊ ಮೋಟಾ ಲಿಮೊನ್ ಹೇಳಿದ್ದಾರೆ.
ಅಂದಹಾಗೆ ಈ ಅಜ್ಜಿ ಎಲ್ಲಾ ಸಾಮಾಜಿಕ ಕಟ್ಟಳೆಗಳನ್ನು ಧಿಕ್ಕರಿಸಿ ಧೈರ್ಯದಿಂದ ಮುನ್ನುಗ್ಗಿದಾಕೆ. ಮೆಕ್ಸಿಕೋದಲ್ಲಿ ಹೆಣ್ಣುಮಕ್ಕಳಿಗೆ ಕಟ್ಟುಪಾಡುಗಳು ಹೆಚ್ಚು. ಇವು ಅಜ್ಜಿಯನ್ನು ಉಸಿರುಗಟ್ಟಿಸಿದ್ದವಂತೆ. ತುಂಬಾ ಮುಂದುವರಿದ ಚಿಂತನೆ ಹೊಂದಿದ ಅಜ್ಜಿ, ಆ ಕಾಲದಲ್ಲಿಯೇ ಎಲ್ಲವನ್ನೂ ಧಿಕ್ಕರಿಸಿದವಳು, ತನ್ನ ಆಸೆಯಂತೆ ಬದುಕಿದಾಕೆ. ಆದ್ದರಿಂದ ಸಾವಿನ ನಂತರವೂ ಅಜ್ಜಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ ಎಂದಿದ್ದಾರೆ ಕುಟುಂಬದವರು.
ಶಿಶ್ನ ಮಾದರಿ ನಿರ್ಮಿಸಬೇಕು ಎಂದು ಇಂಜಿನಿಯರ್ ಬಳಿ ಹೇಳಿದಾಗ ಅವರು ತಮಾಷೆ ಮತ್ತು ಆಶ್ಚರ್ಯದಿಂದ ನೋಡಿದ್ದರು. ಬಳಿಕ 12 ಜನರ ತಂಡ ಅಜ್ಜಿಯ ಆಸೆಯಂತೆಯೇ ಅದನ್ನು ನಿರ್ಮಿಸಿದೆ. ಇದಕ್ಕೆ ಸಂಪ್ರದಾಯವಾದಿಗಳ ವಿರೋಧವಿದ್ದರೂ ಕುಟುಂಬಸ್ಥರು ಮಾತ್ರ ಅಜ್ಜಿಯ ಕೊನೆಯಾಸೆಯನ್ನು ನೆರವೇರಿಸಿದ್ದಾರೆ. (ಏಜೆನ್ಸೀಸ್)