ಇಂಡೋನೇಷ್ಯಾ: ಮದುವೆಯಾಗಲು ಹುಡುಗಿಯೇ ಸಿಗುತ್ತಿಲ್ಲ ಎಂದು ಕೊರಗುತ್ತಿರುವವರು ಅದೆಷ್ಟೋ ಮಂದಿ. ಇದು ಒಂದು ಸಮುದಾಯ, ಒಂದು ದೇಶ ಮಾತ್ರವಲ್ಲದೇ ಹಲವಾರು ದೇಶಗಳಲ್ಲಿಯೂ ಇದೇ ಸಮಸ್ಯೆ ಇದೆ. ಹೀಗೆ ಹುಡುಗಿ ಹುಡುಕಿ ಹುಡುಕಿ ಸಾಕಾಗಿ ಹೋದ ಇಂಡೋನೇಷ್ಯಾದ ಯುವಕನೊಬ್ಬನಿಗೆ ಕೊನೆಗೂ ಹೆಣ್ಣೊಬ್ಬಳು ಸಿಕ್ಕಿದ್ದಾಳೆ. ಆದರೆ "ಈಕೆ" ಅಂತಿಂಥ ಹೆಣ್ಣಲ್ಲ. ಈ ಮದುವೆ ಬಗ್ಗೆ ಕೇಳಿದವರೆಲ್ಲಾ ಶಾಕ್ ಆಗಿದ್ದು, ಮದುವೆಗೆ ಹಾಜರು ಇದ್ದವರು ಇನ್ನೂ ಶಾಕ್ ಆಗಿದ್ದಾರೆ.
ಅಷ್ಟಕ್ಕೂ ಇವನು ಮದುವೆಯಾಗಿರುವುದು ಯಾರನ್ನ ಅಂತೀರಾ? ಹೆಣ್ಣು ಮೇಕೆಯನ್ನು. ಅದೂ ಭರ್ಜರಿ ವಧು ದಕ್ಷಿಣೆ ಕೊಟ್ಟಿದ್ದಾನಂತೆ! ಇವನ ಮದುವೆ ವಿಡಿಯೋ ಭಾರಿ ವೈರಲ್ ಆಗಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ.
ಅಂದಹಾಗೆ ಈತನ ಹೆಸರು ಸೈಫುಲ್ ಆರಿಫ್. ಇವನ ವಯಸ್ಸು 44. ಇಷ್ಟು ವಯಸ್ಸಾದರೂ ಇವನಿಗೆ ಹುಡುಗಿ ಸಿಕ್ಕಿರಲಿಲ್ಲವಂತೆ. ಅದಕ್ಕೆ ಕೊನೆಗೆ ಮೇಕೆಯನ್ನು ಮದುವೆಯಾಗಲು ನಿರ್ಧರಿಸಿದ. ರಹಾಯು ಬಿನ್ ಬೆಜೊ ಎಂಬ ಸುಂದರಿ ಈತನಿಗೆ ಒಲಿದಿದ್ದಾಳೆ. ಇದೇ 5ರಂದು ಇವರ ಮದುವೆಯಾಗಿದೆ.
ಈ ಮೇಕೆಯ ಮಾಲೀಕನಿಗೆ 22 ಸಾವಿರ ರೂಪಾಯಿಗಳನ್ನು ವಧು ದಕ್ಷಿಣೆ ರೂಪದಲ್ಲಿ ಈತ ನೀಡಿದ್ದಾನೆ. ಮದುಮಗನ ಡ್ರೆಸ್‌ನಲ್ಲಿ ಸೈಫುಲ್ ಆರಿಫ್ ಮಿಂಚುತ್ತಿದ್ದರೆ, ಮೇಕೆಗೆ ಶಾಲು ಹೊದಿಸಲಾಗಿದೆ. ಸಾಂಪ್ರದಾಯಿಕ ಜಾವಾನೀಸ್ ವೇಷಭೂಷಣಗಳನ್ನು ಧರಿಸಿದ ಸ್ಥಳೀಯರು ಮದುವೆಗೆ ಸಾಕ್ಷಿಯಾಗಿದ್ದಾರೆ.
ಈ ಮದುವೆಯ ವಿಡಿಯೋ ಜಾಲತಾಣದಲ್ಲಿ ಮಾತ್ರವಲ್ಲದೇ ಸ್ಥಳೀಯ ಟಿ.ವಿ.ಚಾನೆಲ್ಗಳಲ್ಲಿಯೂ ಪ್ರಸಾರ ಮಾಡಿದೆ. ಇದನ್ನು ನೋಡಿ ಅನೇಕ ಮಂದಿ ನಕ್ಕರೆ, ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಸುದ್ದಿ ವೈರಲ್ ಆಗಿ ಆಕ್ರೋಶ ಹೆಚ್ಚುತ್ತಿದ್ದಂತೆಯೇ ತಾನು ತಮಾಷೆಗೆ ಮದುವೆಯಾಗಿದ್ದೇನೆ ಎಂದು ಸೈಫುಲ್ ಆರೀಫ್ ಹೇಳಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವ ಉದ್ದೇಶದಿಂದ ನಾನು ಹೀಗೆ ಮದುವೆಯಾಗಿದ್ದೇನೆ ಎಂದಿದ್ದಾನೆ. ಮದುವೆಯ ಉದ್ದೇಶವೇನು? ನಿಜ ಯಾವುದು, ಸುಳ್ಳು ಯಾವುದು ಎನ್ನುವುದು ಸದ್ಯ ತಿಳಿದುಬಂದಿಲ್ಲ.
ವಿಡಿಯೋ ಇಲ್ಲಿದೆ ನೋಡಿ: ಕೃಪೆ- GRESIK