ನ್ಯೂಸ್

ಗಾಂಧೀಜಿಯ ಆದರ್ಶ ಪಾಲಿಸಿದ್ದರೆ ಆತ್ಮನಿರ್ಭರ್​ ಭಾರತ್​ ಬೇಕಿರಲಿಲ್ಲ: ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮಾತು

suchetana

ನವದೆಹಲಿ: ಗಾಂಧಿಯವರ ಯೋಚನೆ ಜಾರಿಗೊಳಿಸಿದ್ದರೆ, ಅವರ ಮಾತುಗಳನ್ನು ಇಲ್ಲಿಯವರೆಗೆ ಪಾಲನೆ ಮಾಡಿಕೊಂಡು ಬಂದಿದ್ದರೆ ದೇಶ ಉದ್ಧಾರವಾಗುತ್ತಿತ್ತು. ಈಗ ಆತ್ಮನಿರ್ಭರ್​ ಭಾರತ್​ ಅಭಿಯಾನದ ಅವಶ್ಯಕತೆಯೇ ಇರಲಿಲ್ಲ. ಅಷ್ಟು ಸುಂದರ ದೇಶ ನಮ್ಮದಾಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮನ್​ ಕೀ ಬಾತ್​ನ 69ನೇ ಸರಣಿಯಲ್ಲಿ ಪ್ರಧಾನಿ ಮಾತನಾಡುತ್ತಿದ್ದರು. ಇನ್ನೇನು ಗಾಂಧೀಜಿ ಹಾಗೂ ಲಾಲ್​ಬಹಾದ್ದೂರ್​ ಶಾಸ್ತ್ರಿಯವರ ಜನ್ಮದಿನದ ಆಚರಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಗಾಂಧಿಯವರ ಆದರ್ಶ ಜೀವನದ ಬಗ್ಗೆ ಹೇಳಲೇಬೇಕು. ಅವರ ಆದರ್ಶ ಪಾಲನೆ ಅವರ ನಂತರ ಆಗಲೇ ಇಲ್ಲ. ಅವರ ಜೀವನದ ಆದರ್ಶಗಳನ್ನು ನಡೆಸಿಕೊಂಡು ಬಂದಿದ್ದರೆ, ಈಗಿನ ಸ್ಥಿತಿ ಇರುತ್ತಿರಲಿಲ್ಲ ಎಂದು ಹೇಳಿದರು. ಅವರ ನಂತರ ಅವರ ಮಾತುಗಳ ಪಾಲನೆಯಾಗಲೇ ಇಲ್ಲ. ಇದೇ ಕಾರಣಕ್ಕೆ ಆತ್ಮನಿರ್ಭರ್​ ಭಾರತ್​ ಅಭಿಯಾನ ಶುರುಮಾಡುವ ಪರಿಸ್ಥಿತಿ ಬಂದಿದೆ. ಇಲ್ಲದಿದ್ದರೆ ಎಲ್ಲವೂ ಇಲ್ಲಿಯವರೆಗೆ ಸರಿಯಾಗಿಯೇ ನಡೆಯುತ್ತಿತ್ತು ಎಂದರು.

ನಾಳೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಅವರ ಆದರ್ಶ ಗುಣಗಳ ಬಗ್ಗೆ ಪ್ರಧಾನಿ ನೆನಪು ಮಾಡಿಕೊಂಡರು. ನಾಳೆ ಭಗತ್​ ಸಿಂಗ್​ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ, ಅವರು ದೇಶಕ್ಕಾಗಿ ನೀಡಿರುವ ಕೊಡುಗೆಗಳ ಬಗ್ಗೆ ಮಾತನಾಡಿದರು. ಇವರೆಲ್ಲರೂ ಮಾಡಿರುವ ದೇಶಸೇವೆಗಳು ಹಾಗೂ ಬಲಿದಾನಗಳ ಬಗ್ಗೆ ಕಥೆಯ ರೂಪದಲ್ಲಿಯಾದರೂ ಇಂದಿನ ಮಕ್ಕಳಿಗೆ ಹೇಳುವ ಅಗತ್ಯವಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

'ನಾಲ್ಕು ವರ್ಷಗಳ ಹಿಂದೆ ಸುಮಾರು ಇದೇ ಸಮಯದಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು. ಈ ಸಮಯದಲ್ಲಿ ಭಗತ್​ ಸಿಂಗ್​ ಅವರ ಹೋರಾಟದಂತೆಯೇ ನಮ್ಮ ಯೋಧರು ತಮ್ಮ ಪ್ರಾಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಹೋರಾಟ ಮಾಡಿದರು. ದೇಶಕ್ಕಾಗಿ ಅವರು ತಮ್ಮ ಪ್ರಾಣಕ್ಕೆ ಕಿಂಚಿತ್​ ಬೆಲೆ ಕೊಡದೇ ಧೈರ್ಯದಿಂದ ಮುನ್ನುಗ್ಗಿದ್ದರು. ಅವರ ಈ ಹೋರಾಟದ ಫಲವಾಗಿ ಜಯ ನಮ್ಮದಾಯಿತು. ಇದೇ ರೀತಿಯ ದೇಶಕ್ಕಾಗಿ ಕೆಚ್ಚೆದೆಯ ಹೋರಾಟ ಇಂದಿನ ಯುವಕರಲ್ಲಿ ಅವಶ್ಯಕತೆ ಇದೆ' ಎಂದು ಮೋದಿ ಹೇಳಿದರು.

ಇದೇ ಸಮಯದಲ್ಲಿ ಈ ವಾರ ಅನೇಕ ಹೋರಾಟಗಾರರ ಜಯಂತಿ ಇರುವುದನ್ನು ನೆನಪಿಸಿಕೊಂಡ ಪ್ರಧಾನಿ ಮೋದಿಯವರು, 11ರಂದು ಭಾರತ ರತ್ನ ಜಯಪ್ರಕಾಶ್​ ನಾರಾಯಣ್​ ಹಾಗೂ ನಾನಾ ದೇಶ್​ಮುಖ್​ ಅವರ ಜಯಂತಿ ಇರುವುದನ್ನು ನೆನಪಿಸಿಕೊಂಡು ಅವರ ತ್ಯಾಗ ಬಲಿದಾನಗಳ ಬಗ್ಗೆ ಮಾತನಾಡಿದರು.

12ರಂದು ರಾಜಮಾತಾ ಬಿಜೆಪಿ ಹಿರಿಯ ನಾಯಕಿ ವಿಜಯರಾಜೇ ಸಿಂಧಿಯಾ ಅವರ ಜನ್ಮದಿನ ಇರುವುದನ್ನು ನೆನಪಿಸಿಕೊಂಡು ಭಾವುಕರಾದ ಪ್ರಧಾನಿ ಮೋದಿ, ರಾಜಮನೆತನದ ಐಷಾರಾಮಿ ಜೀವನ ಇದ್ದರೂ, ದೇಶಕ್ಕಾಗಿ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಂಡರು.

ಕೆಲ ವರ್ಷಗಳ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಸಿದ ಏಕತಾ ಯಾತ್ರೆಯ ಸಮಯದಲ್ಲಿ ತಾಯಿಯ ಸ್ಥಾನದಲ್ಲಿ ನಿಂತು ವಿಜಯರಾಜೇ ಸಿಂಧಿಯಾ ಅವರು ಅಲ್ಲಿಗೆ ಬಂದಿರುವವರನ್ನು ನೋಡಿಕೊಂಡ ಬಗೆಯನ್ನು ಸ್ಮರಿಸಿಕೊಂಡರು. ಎಲ್ಲರೂ ನಡೆದು ಸುಸ್ತಾಗಿದ್ದ ಸಮಯದಲ್ಲಿ. ಭಯಾನಕ ಚಳಿ ಇದ್ದರೂ ಅದನ್ನು ಲೆಕ್ಕಸಿದೇ ಚಾಲಕನಿಂದ ಹಿಡಿದು ಪ್ರತಿಯೊಬ್ಬರಿಗೂ ಮಧ್ಯರಾತ್ರಿಯೇ ಬಂದು ಆರೋಗ್ಯ ವಿಚಾರಿಸಿಕೊಂಡದ್ದೂ ಅಲ್ಲದೇ ಬಿಸಿಬಿಸಿಯಾಗಿ ಅರಿಶಿಣದ ಹಾಲನ್ನು ನೀಡಿರುವ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿಯವರು ಇಂಥ ಮಾತೆಯರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ನುಡಿದರು.

ಇದೇ ವೇಳೆ, ದೇಶದ ವಿವಿಧ ರಾಜ್ಯಗಳ ರೈತರು ಮಾಡಿರುವ ಸಾಧನೆಗಳ ಬಗ್ಗೆಯೂ ಮೋದಿ ಮಾತನಾಡಿದರು. ಜತೆಗೆ ಕರೊನಾದ ಈ ಬಿಕ್ಕಟ್ಟಿನ ದಿನಗಳಲ್ಲಿ ಮಾಸ್ಕ್​ ಧರಿಸುವುದನ್ನು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪುನಃ ಪ್ರಧಾನಿ ಪ್ರಸ್ತಾಪಿಸಿದರು.