ಬೆಂಗಳೂರು: ಇದೇ ಜನವರಿ ತಿಂಗಳಿನಲ್ಲಿ ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಆತಂಕ ಸೃಷ್ಟಿಸಿದ್ದ ಆರೋಪಿ ಆದಿತ್ಯರಾವ್‌ಗೆ ಇಂದು ಮಂಪರು ಪರೀಕ್ಷೆ ನಡೆಯುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ಬಂಧಿತನಾಗಿರುವ ಈತನನ್ನು ನಿನ್ನೆ ಮಂಗಳೂರಿನಿಂದ ಬೆಂಗಳೂರಿಗೆ ಕರೆತರಲಾಗಿದೆ ಎಂದು ಮೂಲಗಳು ಹೇಳಿವೆ.
ಜನವರಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ. ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಏರ್ಪೋರ್ಟ್ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು.
ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದು ಕಂಡು ಬಂದಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದವರು ಆ ಬಾಂಬನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಿ, ಸ್ಫೋಟಿಸಲಾಗಿತ್ತು.
ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಆದಿತ್ಯರಾವ್ ಬೆಂಗಳೂರು ಡಿಜಿ ಕಚೇರಿಗೆ ಹೋಗಿ ನಾನೇ ಆದಿತ್ಯರಾವ್ ಅಂತ ಹೇಳಿಕೊಂಡು ಶರಣಾಗಿದ್ದ. ಎಂಬಿಎ ಮುಗಿಸಿದ್ದ ಈತ ಮಾನಸಿಕ ಅಸ್ವಸ್ಥ ಎಂದೂ ಹೇಳಲಾಗಿತ್ತು.
ಏನಿದು ಮಂಪರು ಪರೀಕ್ಷೆ?: ಸೋಡಿಯಮ್ ಪೆಂಟೋಥಾಲ್ ಅಥವಾ ಸೋಡಿಯಮ್ ಅಮಾಟಲನಂತಹ ಔಷಧಿ ಕೊಟ್ಟು, ಆರೋಪಿಗಳು ಸುಳ್ಳು ಹೇಳುವ ಶಕ್ತಿಯನ್ನು ಕುಗ್ಗಿಸುವುದು ಇದರ ಉದ್ದೇಶ. ಹಲವಾರು ಉಗ್ರವಾದಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಹಲವಾರು ವಿಷಯಗಳನ್ನು ಹೊರತರಲಾಗಿದೆ.