mamata 
ನ್ಯೂಸ್

ಝಡ್​ ಪ್ಲಸ್​ ಭದ್ರತೆ ಮೀರಿ ದೀದಿ ಮನೆಯ ಆವರಣದೊಳಕ್ಕೆ ರಾಡ್​ ಹಿಡಿದು ಹೋದ! ಗೋಡೆ ಅಳೆದು ಕಾದು ಕುಳಿತ!

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿವಾಸಕ್ಕೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ತೆಗೆದುಕೊಂಡು ನುಸುಳಿದ್ದು, ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಆರೋಪಿಯನ್ನು ಹಫೀಜುಲ್ ಮೊಲ್ಲಾಹ್ ಎಂದು ಗುರುತಿಸಲಾಗಿದ್ದು ಈತ ಹೀಗೆಕೆ ಮಾಡಿದ್ದ ಎನ್ನುವುದು ಇನ್ನಷ್ಟೇ ತನಿಖೆಯಿಂದ ಬಯಲಾಗಬೇಕಿದೆ.

ಈ ನಡುವೆ ಮಮತಾ ಅವರ ನಿವಾಸಕ್ಕೆ ಹೆಚ್ಚಿನ ಪೊಲೀಸ್​ ಬಂದೋಬಸ್ತ್ ಒದಗಿಸಲಾಗಿದೆ. ಕೃತ್ಯಕ್ಕೆ ಮುನ್ನ ಹಫೀಜುಲ್ ಮೊಲ್ಲಾಹ್ ಮಮತಾ ಅವರ ಮನೆಯ ಗೋಡೆಗಳನ್ನು ಅಳತೆ ಮಾಡಿರುವುದು ಸಿಸಿಟಿವಿಯಿಂದ ತಿಳಿದುಬಂದಿದೆ. ಹೀಗೆ ಮಾಡಿದ ಮರುದಿನ ಮನೆಯ ಆವರಣದೊಳಗೆ ಎಲ್ಲರ ಕಣ್ಣುತಪ್ಪಿಸಿ ನುಗ್ಗಿದ್ದಾನೆ.

ಮಮತಾ ಬ್ಯಾನರ್ಜಿಯವರು ಸಾಮಾನ್ಯವಾಗಿ ಪತ್ರಿಕಾಗೋಷ್ಠಿ ನಡೆಸಲು ಜಾಗದಲ್ಲಿಯೇ ಈ ವ್ಯಕ್ತಿ ಅಡಗಿಕುಳಿತುಕೊಂಡಿದ್ದು, ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ. ನಸುಕಿನ 1.20 ರ ಸುಮಾರಿಗೆ ಬ್ಯಾನರ್ಜಿಯವರ ನಿವಾಸವನ್ನು ಪ್ರವೇಶಿಸಿ ಮರುದಿನ ಬೆಳಗ್ಗೆ 8 ಗಂಟೆಯವರೆ ಆವರಣದೊಳಗೆ ಇದ್ದದ್ದು ತಿಳಿದುಬಂದಿದೆ. ಶರ್ಟ್ ಅಡಿಯಲ್ಲಿ ಕಬ್ಬಿಣದ ರಾಡ್ ಬಚ್ಚಿಟ್ಟುಕೊಂಡು ಒಳಗೆ ನುಗ್ಗಿದ್ದಾನೆ.

ಅನುಮಾನಾಸ್ಪದವಾಗಿದ್ದ ಈ ವ್ಯಕ್ತಿಯ ಮೇಲೆ ಭದ್ರತಾ ಸಿಬ್ಬಂದಿ ದೃಷ್ಟಿ ಬೀಳುತ್ತಲೇ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ರಾಡ್ ಕೆಳಕ್ಕೆ ಬಿದ್ದಿದೆ. ನಂತರ ವಿಚಾರಣೆ ಮಾಡಿದಾಗ ಈ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಆತನ ಕುಟುಂಬದವರು ಹೇಳಿರುವುದಾಗಿ ವರದಿಯಾಗಿದೆ.

ಇದರ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರಿಗೆ ನೀಡಲಾಗಿರುವ ಅತ್ಯಂತ ಕಠಿಣ ಝಡ್​ಪ್ಲಸ್​ ಭದ್ರತೆಯನ್ನೂ ಮೀರಿ ಆತ ನುಗ್ಗಿರುವುದು ಹೇಗೆ ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.