ನ್ಯೂಸ್

10 ಗರ್ಲ್‌ಫ್ರೆಂಡ್‌ಗಳ ತೃಪ್ತಿಪಡಿಸಲು ಹೋಗಿ ಸಿಕ್ಕಿಬಿದ್ದ ಖದೀಮ: ಈತನ ಕಥೆ ಕೇಳಿ ಪೊಲೀಸರೇ ಸುಸ್ತು!

ಘಾಜಿಯಾಬಾದ್​​: ಈ ಚಿತ್ರದಲ್ಲಿ ಕಾಣಿಸುತ್ತಿರುವ ವ್ಯಕ್ತಿಯ ಹೆಸರು ಇರ್ಫಾನ್​ ಅಲಿಯಾಸ್​ ಉಜಾಲ್​. ಉತ್ತರ ಪ್ರದೇಶದ ಘಾಜಿಯಾಬಾದ್‌ ನಿವಾಸಿಯಾಗಿರುವ ಈತ ವಿವಾಹಿತ. ಆದರೆ ಈತನಿಗೆ ಇದ್ದುದು ಒಂದಲ್ಲ, ಎರಡಲ್ಲ... 10 ಮಂದಿ ಗರ್ಲ್‌ಫ್ರೆಂಡ್ಸ್‌. ಈ ಎಲ್ಲರನ್ನೂ ತೃಪ್ತಿಪಡಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅಚ್ಚರಿಯ ವಿಷಯ ಎಂದರೆ ಇವನಿಗೆ ಪತ್ನಿಯೇ ಸಾಥ್‌ ಕೊಡುತ್ತಿದ್ದು, ಅವಳನ್ನೂ ಪೊಲೀಸರು ಬಂಧಿಸಿದ್ದಾರೆ.

ಈತ ಮಾಡುತ್ತಿದ್ದುದು ಏನೆಂದರೆ ಒಂದೆಡೆ ಪತ್ನಿ, ಇನ್ನೊಂದೆಡೆ 10 ಮಂದಿ ಗರ್ಲ್‌ಫ್ರೆಂಡ್ಸ್‌. ಎಲ್ಲರನ್ನೂ ಒಟ್ಟಿಗೆ ನಿಭಾಯಿಸಿ ಎಲ್ಲರನ್ನೂ ಸಮಾಧಾನ ಪಡಿಸಬೇಕಿತ್ತು ಇವನು. ಸಿರಿವಂತರಂತೆ ಪೋಸ್‌ ನೀಡುತ್ತಿದ್ದ ಈತನಿಗೆ ಹುಡುಗಿಯರು ಸುಲಭವಾಗಿ ಮರುಳಾಗುತ್ತಿದ್ದುದರಿಂದ ಹೀಗೆ ಸದ್ಯ 10 ಮಂದಿಯನ್ನು ಈತ ಒಟ್ಟಿಗೇ ನಿಭಾಯಿಸುತ್ತಿದ್ದ. ಇದಕ್ಕಾಗಿ ಆತ ಸಿರಿವಂತರ ಮನೆಗೆ ಕನ್ನ ಹಾಕುತ್ತಿದ್ದ.

ಈತನ ವಿರುದ್ಧ ಹಲವಾರು ಕೇಸ್‌ಗಳು ದಾಖಲಾಗಿದ್ದರೂ ಆತ ಸಿಕ್ಕಿಬಿದ್ದಿರಲಿಲ್ಲ. ಇದೀಗ ಕೊನೆಗೂ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನದೇನೂ ತಪ್ಪಿಲ್ಲ. 10 ಮಂದಿಯ ಆಸೆಯನ್ನು ಪೂರೈಸುವುದಕ್ಕಾಗಿ ಹೀಗೆ ಕನ್ನ ಹಾಕುತ್ತಿದ್ದೆ ಎಂದಿದ್ದಾನೆ ಈ ಭೂಪ. ಸದ್ಯ ಈತನಿಂದ ಚಿನ್ನಾಭರಣ,ವಜ್ರ ಸೇರಿದಂತೆ 1 ಕೋಟಿ ರೂ. ಮೌಲ್ಯದ ಜಾಗ್ವಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈತನ ವಿಚಾರಣೆ ವೇಳೆ ಪೊಲೀಸರಿಗೆ ಶಾಕ್‌ ಆಗಿದ್ದಾರೆ. ಏಕೆಂದರೆ ಈತ ಕದ್ದಿರುವ ಮನೆಗಳ ಪೈಕಿ ಅತ್ಯಂತ ಕಠಿಣ ಭದ್ರತೆ ಹೊಂದಿರುವ ಗೋವಾ ರಾಜ್ಯಪಾಲರ ಮನೆ ಹಾಗೂ ನ್ಯಾಯಾಧೀಶರ ಮನೆಗೂ ಕನ್ನ ಹಾಕಿದ್ದಾನಂತೆ! ಮೊದಲಿಗೆ ರಾಜ್ಯಪಾಲರ ಪಕ್ಕದ ಮನೆಗೆ ಕನ್ನ ಹಾಕಿರುವ ಈತ ಕೊನೆಗೆ ಅವರ ಮನೆ ಸೇರಿದಂತೆ ನ್ಯಾಯಾಧೀಶರ ಮನೆಗೂ ಕನ್ನ ಹಾಕಿ ಚಿನ್ನಾಭರಣ ದೋಚಿದ್ದಾನೆ!

ಗೆಳತಿಯರನ್ನು ತೃಪ್ತಿಪಡಿಸುವುದಕ್ಕಾಗಿ ತನ್ನೊಂದಿಗೆ ಬೇರೆ ಯಾರನ್ನೂ ದರೋಡೆಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಹೀಗೊಂದು ವೇಳೆ ಹೋದರೆ ಅವರಿಗೂ ಪಾಲು ಕೊಡಬೇಕಾಗುತ್ತದೆ ಎನ್ನುವ ಕಾರಣ ನೀಡಿರುವ ಈ ಆಸಾಮಿ ಗೋವಾ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಪಂಜಾಬ್​, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್​​​ನಲ್ಲಿ ದರೋಡೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡು ಪೊಲೀಸರಿಗೆ ಮತ್ತಷ್ಟು ಶಾಕ್‌ ನೀಡಿದ್ದಾನೆ!

ಈ ರೀತಿ ದರೋಡೆ ಮಾಡಲು ಈತನಿಗೆ ಪತ್ನಿಯೂ ಸಹಾಯ ಮಾಡುತ್ತಿದ್ದುದು ತಿಳಿದುಬಂದಿದ್ದು ಆಕೆಯನ್ನೂ ಬಂಧಿಸಲಾಗಿದೆ, ಜತೆಗೆ 10 ಮಂದಿ ಗರ್ಲ್‌ಫ್ರೆಂಡ್ಸ್‌ ಪೈಕಿ ಒಬ್ಬಳು ಸಿಕ್ಕಿಬಿದ್ದಿದ್ದಾಳೆ. ಇಷ್ಟೊಂದು ಗೆಳತಿಯರನ್ನು ಈತ ಹೊಂದಿರುವುದು ಪತ್ನಿಗೆ ತಿಳಿದಿದೆಯೋ, ಇಲ್ಲವೋ ಎಂಬ ವಿಷಯ ಇನ್ನಷ್ಟೇ ಹೊರಬರಬೇಕಿದೆ!