ನ್ಯೂಸ್

'ಊಟ ಮಾಡಿದ್ದು ದಲಿತರ ಮನೆಯಲ್ಲೇ... ಆದ್ರೆ ಅಡುಗೆ ಮಾಡಿದ್ದು ಮಾತ್ರ ಬ್ರಾಹ್ಮಣರು'

ಕೋಲ್ಕತಾ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪ ನಡೆಯುತ್ತಲೇ ಸಾಗಿದೆ.

ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಪಶ್ಚಿಮ ಬಂಗಾಳದ ಪ್ರವಾಸ ಮಾಡಿ ದಲಿತ ಕುಟುಂಬದೊಂದಿಗೆ ಕುಳಿತು ಊಟ ಮಾಡಿದ್ದರು. ಬಂಕೂರಾ ಎಂಬಲ್ಲಿನ ಆದಿವಾಸಿ ಕುಟುಂಬದ ನಿವಾಸಕ್ಕೆ ಭೇಟಿ ನೀಡಿದ್ದ ಅವರು ಅಲ್ಲಿ ಊಟ ಮಾಡಿದ್ದರು. ಇದು ಭಾರಿ ಸುದ್ದಿಯಾಗಿತ್ತು.

ಈ ಘಟನೆಗೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಷಾ ಅವರು ಇಲ್ಲಿಗೆ ಬಂದು ದಲಿತರ ಮನೆಯಲ್ಲಿ ಊಟ ಮಾಡಿದ್ದೇನೋ ನಿಜ. ಆದರೆ ಅಲ್ಲಿ ಸಿದ್ಧಪಡಿಸಿದ್ದ ಆಹಾರ ದಲಿತರ ಮನೆಯದ್ದಲ್ಲ, ಬದಲಿಗೆ ಬ್ರಾಹ್ಮಣರು ಮಾಡಿರುವ ಅಡುಗೆ ಅದು' ಎಂದು ಕಿಡಿ ಕಾರಿದ್ದಾರೆ.

ಅಮಿತ್ ಷಾ ಅವರ ರಾಜ್ಯ ಪ್ರವಾಸ ಒಂದು ಷೋ ಆಫ್ ಅಷ್ಟೇ. ದಲಿತ ಕುಟುಂಬವು ಊಟ ತಯಾರಿಸುವಾಗ ಎಲೆಕೋಸು ಮತ್ತು ಕೊತ್ತಂಬರಿಯನ್ನು ಕತ್ತರಿಸುವ ದೃಶ್ಯಗಳು ವಿಡಿಯೋದಲ್ಲಿ ಇದ್ದವು. ಆದರೆ ಅಮಿತ್​ ಷಾ ಅವರ ಉಟದ ತಟ್ಟೆಯಲ್ಲಿ ಅವು ಇರಲಿಲ್ಲ ಎಂದು ಟೀಕಿಸಿದ್ದಾರೆ.

ಬುಡಕಟ್ಟು ಸ್ವತಂತ್ರ ಹೋರಾಟಗಾರ ಬಿರ್ಸಾ ಮುಂಡಾ ಪ್ರತಿಮೆ ಎಂದು ಬೇರೆ ಪ್ರತಿಮೆಗೆ ಅಮಿತ್​ ಷಾ ಮಾಲಾರ್ಪಣೆ ಮಾಡಿದ್ದಾರೆ ಎಂದು ಟೀಕಿಸಿರುವ ಮಮತಾ ಬ್ಯಾನರ್ಜಿ, ಮುಂದಿನ ರಾಜ್ಯ ರಜೆಗಳ ಪಟ್ಟಿಯಲ್ಲಿ ಬಿರ್ಸಾ ಮುಂಡಾ ಜಯಂತಿಯನ್ನೂ ನಮ್ಮ ಸರ್ಕಾರ ಸೇರಲಿದೆ ಎಂದು ಹೇಳಿದರು.