ಕೋಲ್ಕತಾ: ಸದಾ ಬಿಜೆಪಿಯ ಮೇಲೆ ದಾಳಿ ನಡೆಸುತ್ತಲೇ ಬಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಇದು ರಾಜಕೀಯ ವಲಯದಲ್ಲಿಯೇ ಕೋಲಾಹಲ ಸೃಷ್ಟಿ ಮಾಡಿದೆ. ಬಿಜೆಪಿಯ ಭಾಗವೇ ಆಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ದೀದಿ ಕೊಂಡಾಡಿದ್ದಾರೆ.
ಆರ್‌ಎಸ್‌ಎಸ್ ಒಂದು ಕೆಟ್ಟ ಸಂಘಟನೆ ಎಂದು ನಾನು ಭಾವಿಸುವುದಿಲ್ಲ ಎಂದು ಮಮತಾ ಹೇಳಿಕೆ ಕೊಟ್ಟಿದ್ದಾರೆ. ಆರ್‌ಎಸ್‌ಎಸ್‌ನಲ್ಲಿರುವ ಎಲ್ಲರೂ ಕೆಟ್ಟವರಲ್ಲ. ಬಿಜೆಪಿಯನ್ನು ವಿರೋಧಿಸುವ ಕೆಲವರು, ಒಳ್ಳೆಯವರೂ ಆಗಿದ್ದಾರೆ. ಅವರು ಶೀಘ್ರದಲ್ಲೇ ಆರ್ಎಸ್ಎಸ್ನಿಂದ ಹೊರಬರುತ್ತಾರೆ ಎನ್ನುವ ಮೂಲಕ ಆರ್‌ಎಸ್‌ಎಸ್ ಬಗ್ಗೆ ಮೃದು ಧೋರಣೆ ತಾಳಿ ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಅವರು, ಆರ್‌ಎಸ್‌ಎಸ್ ಕೆಟ್ಟ ಸಂಘಟನೆ ಎಂದು ನಾನು ಭಾವಿಸುವುದಿಲ್ಲ. ಈಗ ಸಂಘಟನೆಯಲ್ಲಿರುವವರು ಬಿಜೆಪಿಯಲ್ಲಿ ಇರುವವರಂತೆ ಯೋಚಿಸದವರೂ ಇದ್ದಾರೆ. ಒಂದಲ್ಲ ಒಂದು ದಿನ ಅವರ ಈ ತಾಳ್ಮೆ ಕಳೆದುಕೊಂಡು ಬಿಜೆಪಿಯಿಂದ ಹೊರಕ್ಕೆ ಬರುತ್ತಾರೆ. ಅವರೆಲ್ಲಾ ಒಳ್ಳೆಯವರು. ಆರ್‌ಎಸ್‌ಎಸ್‌ನವರು ಕೂಡ ಶೀಘ್ರದಲ್ಲೇ ಬಿಜೆಪಿಯನ್ನು ವಿರೋಧಿಸಲಿದ್ದಾರೆ ಎಂದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಆರ್‌ಎಸ್‌ಎಸ್ ಸಂಘಟನೆಗೆ ಮಮತಾ ಬ್ಯಾನರ್ಜಿ ಅವರ ಪ್ರಮಾಣಪತ್ರಗಳ ಅಗತ್ಯವಿಲ್ಲ ಎಂದಿದೆ. ಇದೇ ವೇಳೆ ಹೈದರಾಬಾದ್ ಮೂಲದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಮಮತಾ ಅವರ ಮಾತಿಗೆ ಕಿಡಿ ಕಾರಿದ್ದಾರೆ.
ಮಮತಾ ಬ್ಯಾನರ್ಜಿ 2003ರಲ್ಲಿಯೂ ಆರ್‌ಎಸ್‌ಎಸ್ನಲ್ಲಿ ಇರುವವರನ್ನು 'ದೇಶಭಕ್ತರು' ಎಂದು ಕರೆದಿದ್ದರು. ಪ್ರತಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಮತಾ ಬ್ಯಾನರ್ಜಿ ಅವರನ್ನು ದುರ್ಗಾ ಎಂದು ಕರೆದಿತ್ತು ಎಂದು ಓವೈಸಿ ಹಳೆ ಘಟನೆ ಮೆಲುಕು ಹಾಕಿ ಟೀಕೆ ನಡೆಸಿದ್ದಾರೆ. ಸದ್ಯ ಮಮತಾ ಬ್ಯಾನರ್ಜಿ ಆರ್‌ಎಸ್‌ಎಸ್ ಅನ್ನು ಹೊಗಳಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿದೆ. (ಏಜೆನ್ಸೀಸ್)
ವಿಡಿಯೋ ಇಲ್ಲಿದೆ ನೋಡಿ: