ನ್ಯೂಸ್

80ರ ಖರ್ಗೆಗೆ ಒಲಿಯತ್ತಾ ಎಐಸಿಸಿ ಪಟ್ಟ? ಭಿನ್ನಮತಿಯರೂ ಸೇರಿ 30 ಮಂದಿ ಸಹಿಯೊಂದಿಗೆ ನಾಮಪತ್ರ ಸಲ್ಲಿಕೆ

ನವದೆಹಲಿ: ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ ಸದ್ಯ ಒಂದು ಹಂತಕ್ಕೆ ಬಂದು ನಿಂತಿದೆ. ಇದಾಗಲೇ ಅಧ್ಯಕ್ಷ ಸ್ಥಾನದ ರೇಸ್​ನಿಂದ ರಾಜಸ್ಥಾನದ ಸಿಎಂ ಅಶೋಕ್​ ಗೆಹ್ಲೋಟ್​, ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹಿಂದೆ ಸರಿದಿದ್ದಾರೆ. ಸದ್ಯ ರೇಸ್​ನಲ್ಲಿ ಸಂಸದ ಶಶಿ ತರೂರ್​, ಮಾಜಿ ಸಚಿವ ಕೆ.ಎನ್​.ತ್ರಿಪಾಠಿ ಹಾಗೂ ರಾಜ್ಯಸಭಾ ವಿರೋಧ ಪಕ್ಷ ನಾಯಕ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಕಣದಲ್ಲಿದ್ದಾರೆ.

ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಈಗ ಎಲ್ಲರ ಚಿತ್ತ ನೆಟ್ಟಿರುವುದು ಮಲ್ಲಿಕಾರ್ಜುನ ಖರ್ಗೆ ಅವರತ್ತ. ಇದಾಗಲೇ ಶಶಿ ತರೂರ್​ಗೆ ಅವರ ತವರು ಕೇರಳದಲ್ಲಿಯೇ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಹಾಗೂ ಖರ್ಗೆ ಅವರತ್ತ ಹೈಕಮಾಂಡ್​ ಕೂಡ ಒಲವು ತೋರಿರುವ ಕಾರಣದಿಂದ ಅವರೇ ಈ ಹುದ್ದೆ ಏರುವ ಸಾಧ್ಯತೆ ಕಾಣುತ್ತಿದೆ.

ಕಾಂಗ್ರೆಸ್​ ಪಕ್ಷದ ಪ್ರಧಾನ ಕಚೇರಿಗೆ ತೆರಳಿದ ಮಲ್ಲಿಕಾರ್ಜುನ ಖರ್ಗೆ ತಮ್ಮ ಉಮೇದುವಾರಿಕೆ ಸಲ್ಲಿಸಿ, ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಖರ್ಗೆ ನಾಮಪತ್ರಕ್ಕೆ ಸೂಚಕರಾಗಿ ಒಟ್ಟು 30 ಕಾಂಗ್ರೆಸ್ ನಾಯಕರು ಸಹಿ ಮಾಡಿದ್ದಾರೆ. ಪ್ರಮುಖವಾಗಿ ಎಕೆ ಆ್ಯಂಟಿನಿ, ಅಶೋಕ್ ಗೆಹ್ಲೋಟ್​, ಅಂಬಿಕಾ ಸೋನಿ, ಮುಕುಲ್​ ವಾಸ್ನಿಕ್​, ಆನಂದ ಶರ್ಮಾ, ದಿಗ್ವಿಜಯ್​ ಸಿಂಗ್​, ಭುಪೇಂದ್ರಸಿಂಗ್ ಹೂಡ, ಪ್ರಮೋದ್ ತಿವಾರಿ, ಪಾಲ್ ಪುನಿಯಾ, ಪವನ್ ಕುಮಾರ್ ಬನ್ಸಾಲ್ ಅವರಂತಹ ಹಿರಿಯ ನಾಯಕರು ಖರ್ಗೆ ಬೆಂಬಲಕ್ಕೆ ನಿಂತಿದ್ದಾರೆ.

ಕಾಂಗ್ರೆಸ್​ನ ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ನಾಯಕರು ಕೂಡ ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆಯನ್ನು ನಾನು ಮತ್ತು ಆನಂದ್ ಶರ್ಮಾ ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದರು.

'ಅಕ್ಟೋಬರ್ 17ರಂದು ಫಲಿತಾಂಶ ಬರುತ್ತದೆ. ಅಂದು ಏನಾಗುವುದೋ ನೋಡೋಣ. ನಾನು ಗೆಲ್ಲುವ ಭರವಸೆ ಇದೆ. ಗಾಂಧಿ ನೆಹರೂ ಸಿದ್ಧಾಂತ ಪ್ರಚಾರ ಮಾಡುತ್ತಿದ್ದೆ, ಇದರಿಂದ ಇಂಥದ್ದೊಂದು ಅವಕಾಶ ನನಗೆ ಸಿಕ್ಕಿದೆ. ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ. ನಾನು ಬಾಲ್ಯದಿಂದಲೂ ಕಾಂಗ್ರೆಸ್ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾನು 8, 9ನೇ ತರಗತಿಯಲ್ಲಿದ್ದಾಗ ಗಾಂಧಿ, ನೆಹರೂ ಸಿದ್ಧಾಂತವನ್ನೇ ಪ್ರಚಾರ ಮಾಡುತ್ತಿದ್ದೆ' ಎಂದು ಖರ್ಗೆ ಹೇಳಿದರು. (ಏಜೆನ್ಸೀಸ್​)