ನ್ಯೂಸ್

ಮದ್ಯಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟ ‘ಮಹಾ’ ಸರ್ಕಾರ: ಸ್ಕಾಚ್‌, ವಿಸ್ಕಿ ಬೆಲೆ ಅರ್ಧಕ್ಕರ್ಧ ಕಮ್ಮಿ!

suchetana

ಮುಂಬೈ: ಈಗ ಎತ್ತ ನೋಡಿದರೂ ಬೆಲೆ ಏರಿಕೆ ಮಾತೇ. ದಿನಬಳಕೆ ವಸ್ತುಗಳು, ತರಕಾರಿ, ಹಣ್ಣುಗಳ ಬೆಲೆಯಿಂದ ಹಿಡಿದು ಪೆಟ್ರೋಲ್‌ ಡೀಸೆಲ್‌ ಬೆಲೆಗಳು ಗಗನಮುಖಿಯಾಗುತ್ತಿರುವ ಈ ಹೊತ್ತಿನಲ್ಲಿ ಮದ್ಯಪ್ರಿಯರಿಗೆ ಮಹಾರಾಷ್ಟ್ರ ಸರ್ಕಾರ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ.

ಅದೇನೆಂದರೆ ಸ್ಕಾಚ್‌, ವಿಸ್ಕಿ ಬೆಲೆಗಳು ಇಲ್ಲಿ ಅರ್ಧಕ್ಕರ್ಧ ಕಮ್ಮಿಯಾಗಲಿವೆ. ಮಹಾರಾಷ್ಟ್ರದಲ್ಲಿ ಆಮದು ಮಾಡಿಕೊಳ್ಳುವ ಸ್ಕಾಚ್, ವಿಸ್ಕಿಯ ಬೆಲೆಯನ್ನು ಇತರ ರಾಜ್ಯಗಳಿಗೆ ಸರಿಸಮನಾಗಿ ತರಲು ಈ ಒಂದು ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಇವುಗಳ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 50 ರಷ್ಟು ಕಡಿತಗೊಳಿಸಿದೆ.

‘ಆಮದು ಮಾಡಿಕೊಂಡ ಮದ್ಯಗಳ ಮೇಲಿನ ಅಬಕಾರಿ ಸುಂಕವನ್ನು ಉತ್ಪಾದನಾ ವೆಚ್ಚದ 300 ಪ್ರತಿಶತದಿಂದ 150 ಪ್ರತಿಶತಕ್ಕೆ ಇಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯ ಇರುವ ಬೆಲೆಗಳಿಗಿಂತ ದರವು ಅರ್ಧಕ್ಕರ್ಧ ಕಮ್ಮಿಯಾಗಲಿದೆ. 1000 ಮಿಲಿ ಆಮದು ಮಾಡಿದ ಸ್ಕಾಚ್ ವಿಸ್ಕಿ ಬಾಟಲಿಯ ಬೆಲೆ ಕನಿಷ್ಠ ರೂ 5,800 ರಿಂದ ಗರಿಷ್ಠ ರೂ 14 ಸಾವಿರ ಇರುತ್ತದೆ. ಇದರ ಬೆಲೆಯೀಗ ಕನಿಷ್ಠ ಶೇಕಡಾ 35 ರಿಂದ 40ರಷ್ಟು ಕಡಿಮೆಯಾಗಲಿದೆ ಎಂದು ಮಹಾರಾಷ್ಟ್ರ ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. . ಇತರ ರಾಜ್ಯಗಳಿಂದ ಸ್ಕಾಚ್ ಕಳ್ಳಸಾಗಣೆ ಮತ್ತು ನಕಲಿ ಮದ್ಯ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

. ಆಮದು ಮಾಡಿಕೊಳ್ಳುವ ಸ್ಕಾಚ್ ಮಾರಾಟದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ವಾರ್ಷಿಕ 100 ಕೋಟಿ ರೂಪಾಯಿ ಆದಾಯ ಬರುತ್ತದೆ. ಒಂದು ಲಕ್ಷ ಬಾಟಲಿಯಿಂದ ಎರಡೂವರೆ ಲಕ್ಷ ಬಾಟಲಿಗಳಿಗೆ ಮಾರಾಟವಾಗುವ ನಿರೀಕ್ಷೆ ಇರುವುದರಿಂದ ಆದಾಯ 250 ಕೋಟಿ ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸರ್ಕಾರ ಅಂದಾಜಿಸಿದೆ.

ಮಹಾರಾಷ್ಟ್ರದ ಅಬಕಾರಿ ಇಲಾಖೆಯ ಅಂಕಿಅಂಶದ ಪ್ರಕಾರ, 2016-17, 2017-18 ಹಾಗೂ 2018-19ನೇ ಸಾಲಿನಲ್ಲಿ ಸರ್ಕಾರ 200 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಿದೆ. ಆದರೆ 2019-20 ಹಾಗೂ 2020-21ನೇ ಸಾಲಿನಲ್ಲಿ ಇದು100 ಕೋಟಿ ರೂ.ಗೆ ಕುಸಿದಿದೆ.