ಭೋಪಾಲ್: ಬೈಕ್‌ನಲ್ಲಿ ಹೋಗುವಾಗ ಕೆಸರು ನೀರನ್ನು ಹಾದಿಹೋಕರ ಮೇಲೆ ಹಾರಿಸಿ ಹೋಗುವುದು ಮಾಮೂಲು. ಕೆಲವರು ಬೇಕಂತಲೇ ವಿಕೃತಿ ಮೆರೆದರೆ, ಇನ್ನು ಕೆಲವೊಮ್ಮೆ ಉದ್ದೇಶವಿಲ್ಲದಿದ್ದರೂ ನೀರು ಸಿಡಿಯುತ್ತದೆ. ಅಂಥ ಸಂದರ್ಭದಲ್ಲಿ ದಾರಿಹೋಕರು ಹಿಡಿಶಾಪ ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡಲು ಆಗುವುದಿಲ್ಲ.
ಆದರೆ ಮಧ್ಯಪ್ರದೇಶದ ರೇವಾದಲ್ಲಿ ನಡೆದ ಘಟನೆ ಸ್ವಲ್ಪ ಭಿನ್ನವಾಗಿದೆ. ವಿಡಿಯೋ ವೈರಲ್ ಆಗ್ತಿದೆ. ಪ್ರಕರಣದಲ್ಲಿ ಹಾಗಾಗಲಿಲ್ಲ. ದಾರಿಯಲ್ಲಿ ನಿಂತಿದ್ದ ಮಹಿಳೆಯ ಮೇಲೆ ಕೆಸರು ನೀರು ಹಾರಿಸಿ ಹೋದ ವ್ಯಕ್ತಿಯೊಬ್ಬನ ಗ್ರಹಚಾರ ನೆಟ್ಟಗಿರಲಿಲ್ಲ. ಇದಕ್ಕೆ ಕಾರಣ, ಆತ ಕೆಸರು ಹಾರಿಸಿದ್ದು, ಸಾಮಾನ್ಯ ಮಹಿಳೆಯ ಮೇಲಲ್ಲ, ಬದಲಿಗೆ ಗೃಹರಕ್ಷಕ ದಳದ ಮಹಿಳಾ ಕಾನ್ಸ್‌ಟೆಬಲ್ ಮೇಲೆ. ಇದರಿಂದ ಸಿಟ್ಟಿಗೆದ್ದ ಕಾನ್ಸ್‌ಟೆಬಲ್ ಆ ವ್ಯಕ್ತಿಯನ್ನು ತಡೆದು, ಆತನಿಂದಲೇ ತಮ್ಮ ತನ್ನ ಪ್ಯಾಂಟ್ ಸ್ವಚ್ಛಗೊಳಿಸಿಕೊಂಡಿದ್ದಾರೆ, ಮಾತ್ರವಲ್ಲದೇ ಆ ವ್ಯಕ್ತಿಗೆ ಕಪಾಳಮೋಕ್ಷ ಕೂಡ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ ಈ ವ್ಯಕ್ತಿ ತನ್ನ ಬೈಕ್ ಅನ್ನು ಹಿಂದಕ್ಕೆ ತೆಗೆಯುತ್ತಿದ್ದ. ಅಲ್ಲಿಯೇ ಕೆಸರು ನೀರು ಇತ್ತು. ಅದನ್ನು ಆತ ಗಮನಿಸಿದ್ದಂತಿಲ್ಲ. ಪಕ್ಕದಲ್ಲಿಯೇ ಪೊಲೀಸ್ ಇದ್ದದ್ದನ್ನು ನೋಡಿದ್ದರೆ ಖಂಡಿತವಾಗಿಯೂ ಈತ ಆ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಆದರೆ ಅಚಾನಕ್ ಆಗಿ ಕೆಸರು ಸಿಡಿದು ಅದು ಪೊಲೀಸ್ ಸಿಬ್ಬಂದಿ ಫ್ಯಾಂಟ್ಗೆ ಬಡಿದಿದೆ. ಇದರಿಂದ ಅವರು ಸಿಟ್ಟಿಗೆದ್ದು ಈ ಕೆಲಸ ಮಾಡಿಸಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದು, ಥಹರೇವಾರಿ ಕಮೆಂಟ್‌ಗಳು ಬರುತ್ತಿವೆ. ಈ ಜನ್ಮದಲ್ಲಿ ಈತ ಯಾರ ಮೇಲೂ ಬೈಕ್‌ನಿಂದ ಕೆಸರು ಹಾರಿಸಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಗೃಹರಕ್ಷಕ ದಳದ ಕಾನ್ಸ್‌ಟೆಬಲ್ ಅವರನ್ನು ಶಶಿಕಲಾ ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಾತನಾಡಿದ ರೇವಾ ಎಸ್ಪಿ ಶಿವಕುಮಾರ್, 'ನಾವು ಘಟನೆಯ ವಿಡಿಯೋ ಗಮನಿಸಿದ್ದೇವೆ. ವ್ಯಕ್ತಿಯೋರ್ವ ಬಲವಂತವಾಗಿ ಪ್ಯಾಂಟ್ ಸ್ವಚ್ಛಗೊಳಿಸುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ದೂರು ನೀಡಿದರೆ, ವಿಚಾರಣೆ ನಡೆಸುತ್ತೇವೆ' ಎಂದು ತಿಳಿಸಿದರು.
ಇಲ್ಲಿದೆ ನೋಡಿ ವಿಡಿಯೋ: