ನ್ಯೂಸ್

ನಾವೇ ಸಾಕಿದ ಗಿಣಿ... ಇದ್ಯಾಕೆ ಹೀಗಾಯ್ತೋ... ಮೃಗಾಲಯ ಸಿಬ್ಬಂದಿ ಸುಸ್ತೋ ಸುಸ್ತು!

ಲಂಡನ್​: ಮನೆಯಲ್ಲಿ ಸಾಕುವ ಗಿಣಿಗಳಿಗೆ ಮಾಲೀಕರು ಒಳ್ಳೊಳ್ಳೆ ಮಾತು ಕಲಿಸುತ್ತಾರೆ. ಮನೆಯಲ್ಲಿ ಬಂದವರಿಗೆ ಸ್ವಾಗತ ಮಾಡುವುದು, ಹೊರಡುವಾಗ ಟಾ ಟಾ ಮಾಡುವುದು ಎಲ್ಲವನ್ನೂ ಕಲಿಸುತ್ತಾರೆ. ಆದರೆ ಇಲ್ಲೊಂದು ಮೃಗಾಲಯದಲ್ಲಿ ಗಿಳಿ ಮಾತನಾಡುತ್ತಿರುವ ಪರಿಗೆ ಅಲ್ಲಿಯ ಸಿಬ್ಬಂದಿಯೇ ಬೇಸ್ತು ಬಿದ್ದಿದ್ದಾರೆ.

ಲಂಡನ್​ ಲಿಂಕನ್​ಶೈರ್​ ವನ್ಯಜೀವಿ ಉದ್ಯಾನವನದಲ್ಲಿರುವ ಗಿಣಿಗಳು ಇಲ್ಲಿಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿವೆ. ಈ ಮೃಗಾಲಯಕ್ಕೆ ಐದು ಆಫ್ರಿಕನ್ ಗಿಳಿಗಳನ್ನು ಖರೀದಿಸಿ ತರಲಾಗಿದೆ. ಈ ಎಲ್ಲಾ ಗಿಳಿಗಳನ್ನೂ ಒಂದೇ ಕೋಣೆಯಲ್ಲಿ ಇಡಲಾಗಿದೆ. ಮೃಗಾಲಯ ಸಿಬ್ಬಂದಿ ಇದನ್ನು ತುಂಬಾ ಎಚ್ಚರಿಕೆಯಿಂದ, ಮುದ್ದಿನಿಂದ ಸಾಕಿದ್ದಾರೆ.

ಆದರೆ ಸಿಬ್ಬಂದಿಗೆ ಅಚ್ಚರಿಯಾಗಿರುವ ವಿಷಯ ಎಂದರೆ ಈ ಎಲ್ಲಾ ಗಿಳಿಗಳು ಕೆಟ್ಟ ಶಬ್ದಗಳನ್ನು ಕಲಿತುಕೊಂಡುಬಿಟ್ಟಿವೆಯಂತೆ. ಎಲ್ಲವೂ ಒಂದೇ ತೆರನಾಗಿ ಅಸಭ್ಯ ಶಬ್ದಗಳನ್ನು ಮಾತನಾಡಿಕೊಳ್ಳುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.

ಮೊದಮೊದಲು ಇದನ್ನು ನಾವು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದೆವು. ಆದರೆ ಇದೀಗ ಇದು ಹಿಂಸೆ ಎನಿಸುತ್ತಿದೆ. ಏಕೆಂದರೆ ಮೃಗಾಲಯವನ್ನು ನೋಡಲು ಬರುವವರಿಗೂ ಇದು ಇದೇ ರೀತಿಯ ಅಶ್ಲೀಲ ಶಬ್ದಗಳ ಬಳಕೆ ಮಾಡುತ್ತಿವೆ. ಇದರಿಂದ ವೀಕ್ಷಣೆಗೆ ಬರುವವರಿಗೆ ಮುಜುಗರ ಉಂಟಾಗಲು ಶುರುವಾಗಿದ್ದು, ಏನು ಮಾಡಬೇಕು ಎನ್ನುವುದೇ ತೋರಲಿಲ್ಲ ಎನ್ನುತ್ತಾರೆ ಇಲ್ಲಿಯ ಸಿಬ್ಬಂದಿ.

ಈ ಎಲ್ಲಾ ಗಿಳಿಗಳನ್ನು ಬೇರೆ ಬೇರೆ ಕಡೆಗಳಿಂದ ಬೇರೆ ಬೇರೆ ದಿನಗಳಲ್ಲಿ ಖರೀದಿ ಮಾಡಲಾಗಿದೆ. ಆದರೆ ಎಲ್ಲವನ್ನೂ ಒಟ್ಟಿಗೇ ಕೂಡಿ ಹಾಕಿದ್ದು ಎಡವಟ್ಟಾದಂತೆ ತೋರುತ್ತಿದೆ. ಯಾವುದೋ ಒಂದು ಗಿಣಿ ಕೆಟ್ಟ ಬೈಗುಳ ಕಲಿತಿದೆ. ಬಹುಶಃ ಅದನ್ನು ಎಲ್ಲಾ ಗಿಳಿಗಳೂ ಕಲಿತಿರುವಂತೆ ತೋರುತ್ತಿದೆ ಎಂದು ವನ್ಯಜೀವಿ ಉದ್ಯಾನದ ಸಿಇಒ ಸ್ಟೀವ್ ನಿಕೊಲ್ಸ್​ ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ಇವುಗಳನ್ನು ಪ್ರತ್ಯೇಕಿಸಿ ಇಡಲಾಗಿದೆ. ಎಲ್ಲಾ ಗಿಳಿಗಳನ್ನು ಬೇರೆ ಬೇರೆ ವಿಭಾಗಗಳೊಂದಿಗೆ ಬಿಡುವ ಯೋಚನೆಯೂ ಅಧಿಕಾರಿಗಳಿಗೆ ಇದೆ. ಹೀಗಾದಾಗ ಈ ಗಿಳಿಗಳು ಪರಸ್ಪರ ಅಶ್ಲೀಲ ಪದಗಳನ್ನು ಕಲಿಯುವ ಸಾಧ್ಯತೆ ಇಲ್ಲ ಎಂದು ಚಿಂತನೆ ನಡೆಸಲಾಗಿದೆ.

ಕಳೆದ ವರ್ಷ ಜೆಸ್ಸಿಯಾ ಎಂಬ ಸಾಕುಗಿಳಿ ತನ್ನ ಅಶ್ಲೀಲ ಪದ ಬಳಕೆಯ ಕಾರಣದಿಂದಲೇ ಸುದ್ದಿಯಾಗಿದ್ದು ಇಲ್ಲಿ ಉಲ್ಲೇಖಾರ್ಹ. ಸಾಕು ಮನೆಯಿಂದ ಹಾರಿ ಬೇರೊಬ್ಬರ ಮನೆಯ ಮೇಲೆ ಕುಳಿತಿದ್ದ ಈ ಗಿಳಿಯನ್ನು ಅಗ್ನಿಶಾಮಕ ದಳದ ಸಹಾಯದಿಂದ ಕೆಳಕ್ಕೆ ಇಳಿಸಲು ಪಡೆದಿದ್ದರು. ಆಗ ಇದು ಕೆಟ್ಟದ್ದಾಗಿ ಬೈದು ಸಿಬ್ಬಂದಿಯನ್ನು ಸುಸ್ತು ಮಾಡಿತ್ತು.