ಲಖನೌ: ಅಕ್ಟೋಬರ್ 3ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹರಿಸಿ ನಡೆಸಿದ ಘಟನೆಯ ಪ್ರಮುಖ ಆರೋಪಿ, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರಿಗೆ ಡೆಂಘೆ ಜ್ವರದ ಶಂಕೆ ಉಂಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಜ್ವರದ ಸ್ವರೂಪ ಡೆಂಘೆ ಮಾದರಿಯಲ್ಲಿ ಇದ್ದು, ಇನ್ನಷ್ಟೇ ಇದರ ಪರೀಕ್ಷೆ ನಡೆಯಬೇಕಿದೆ.
ಆಶಿಶ್ ಮಿಶ್ರಾಗೆ ಜ್ವರ ಬಂದಿದೆ. ಡೆಂಘೆ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ ಡೆಂಘೆ ಹೌದೋ ಅಲ್ಲವೋ ಎನ್ನುವುದು ತಿಳಿಯುತ್ತಿಲ್ಲ. ರಕ್ತದ ಮಾದರಿಯ ತಪಾಸಣೆ ವರದಿ ಬಂದ ಬಳಿಕವಷ್ಟೇ ನಿಖರವಾಗಿ ಗೊತ್ತಾಗಲಿದೆ ಎಂದು ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದ ಪೊಲೀಸ್ ಅಧೀಕ್ಷಕ ಪಿಪಿ ಸಿಂಗ್ ಮಾಹಿತಿ ನೀಡಿದ್ದಾರೆ. ಆಶಿಶ್ ಅವರ ರಕ್ತದ ಮಾದರಿಯನ್ನು ಲಖನೌದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರೈತರ ಪ್ರತಿಭಟನೆಯ ಸಮಯದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಮತ್ತು ಸ್ಥಳೀಯ ಪತ್ರಕರ್ತ ಸೇರಿದಂತೆ ಎಂಟು ಜನರು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ತೆಗೆದಿರುವ ವಿಡಿಯೋದಲ್ಲಿ ಆಶೀಶ್ ಮಿಶ್ರಾ ವಾಹನದಿಂದ ಇಳಿದು ಓಡುವ ದೃಶ್ಯ ಕಂಡುಬಂದಿದ್ದು, ಅವರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.