ಸೈನ್‌ಪುರ (ಪಂಜಾಬ್): ರೌಡಿ ಎನ್ನುವ ಕಾರಣಕ್ಕೆ ಮದುವೆಯಾಗಿಲ್ಲ ಎಂದು ಸೋದರ ಮಾವನ ಮಗಳನ್ನೇ ಪಾಗಲ್ ಪ್ರೇಮಿ ಹತ್ಯೆ ಮಾಡಿರುವ ಭಯಾನಕ ಘಟನೆ ಪಂಜಾಬ್‌ನ ಸೈನ್‌ಪುರ ಗ್ರಾಮದಲ್ಲಿ ನಡೆದಿದೆ.
ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಆರೋಪಿಯಾಗಿರುವ ರಾಹುಲ್, ಜೈಲಿನಲ್ಲಿದ್ದ. ಅವನಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನಿನ ಮೇಲೆ ಹೊರಕ್ಕೆ ಬಂದು ಈತ ಈ ಕೃತ್ಯ ಎಸಗಿದ್ದಾನೆ. ಈತನ ಈ ದುಷ್ಕೃತ್ಯಕ್ಕೆ ಬಲಿಯಾದವರು ಪೂಜಾ ಎಂಬ ಯುವತಿ.
ರೌಡಿಯಾಗಿದ್ದೂ ಅಲ್ಲದೇ ಜೈಲಿಗೆ ಹೋಗಿರುವ ಈತನನ್ನು ಮದುವೆಯಾಗಲು ಪೂಜಾ ನಿರಾಕರಿಸಿದ್ದಾರೆ. ಜೈಲಿನಿಂದ ಬರುತ್ತಿದ್ದಂತೆಯೇ ರಾಹುಲ್ ಮದುವೆಗೆ ದುಂಬಾಲು ಬಿದ್ದರೂ ಆಕೆ ಕೇಳಲಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಾನೆ. ಪೂಜಾಳ ಮನೆಗೆ ನುಗ್ಗಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪೂಜಾಳ ಅಣ್ಣ, ರಾಹುಲ್ಗೆ ಕ್ರಿಮಿನಲ್ ಹಿನ್ನೆಲೆಯಿತ್ತು. ಹೀಗಾಗಿ ಆತನನ್ನು ಮದುವೆಯಾಗಲು ಪೂಜಾ ನಿರಾಕರಿಸಿದ್ದಳು. ಆರೋಪಿಗಳ ವಿರುದ್ಧ ಪೊಲೀಸ್ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಆರೋಪಿ ಕೊಲೆಯಾದ ಯುವತಿಯ ಮನೆಯ ಹತ್ತಿರ ಸುಳಿದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.