ನ್ಯೂಸ್

ಮಥುರಾದಲ್ಲಿ ಶ್ರೀಕೃಷ್ಣ ದೇಗುಲ ನಿರ್ಮಿಸಲು ಮರಗಳು ಕಟ್​- ಯೋಗಿ ಸರ್ಕಾರಕ್ಕೆ 'ಸುಪ್ರೀಂ' ಹೇಳಿದ್ದೇನು?

ನವದೆಹಲಿ: ಉತ್ತರ ಪ್ರದೇಶದ ಮಥುರಾ ಶ್ರೀಕೃಷ್ಣ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿಸ್ತರಣೆ ಮಾಡುವ ಸಂಬಂಧ ಮೂರು ಸಾವಿರ ಮರಗಳನ್ನು ಕತ್ತರಿಸಲು ಮುಂದಾಗಿದ್ದ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯುಂಟಾಗಿದೆ.

ದೇಗುಲ ನಿರ್ಮಾಣಕ್ಕಾಗಿ ಸಹಸ್ರಾರು ಮರಗಳನ್ನು ಕಡಿಯುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದಿರುವ ಕೋರ್ಟ್​, ಮರಗಳಿಗೆ ಹಾನಿಯಾಗದಂತೆ ರಸ್ತೆಯನ್ನು ನಿರ್ಮಾಣ ಮಾಡಬಹುದು ಎಂದು ಹೇಳಿದೆ. ಮರಗಳು ಇರುವ ಕಡೆಗಳಲ್ಲಿ ತಿರುವು ಮುರುವಾಗಿ (ಜಿಗ್​ ಜಾಗ್​) ರಸ್ತೆಗಳನ್ನು ನಿರ್ಮಿಸುವುದರಿಂದ ಮರಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದಾಗಿದೆ ಎಂದಿದೆ.

ಮರಗಳನ್ನು ಕತ್ತರಿಸುವ ವಿರುದ್ಧ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಸರ್ಕಾರ ಸುಪ್ರೀಂಕೋರ್ಟ್​ ಮೊರೆ ಹೋಗಿತ್ತು.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ಪೀಠ, ಮರಗಳನ್ನು ಕತ್ತರಿಸಲು ಅವಕಾಶ ನೀಡುವುದಿಲ್ಲ ಎಂದಿದೆ.

ಇವುಗಳ ಬದಲು ಹೊಸ ಗಿಡಗಳನ್ನು ಬೇರೆ ಜಾಗದಲ್ಲಿ ನೆಡುವುದಾಗಿ ಸರ್ಕಾರ ಹೇಳಿದರೂ ಅದನ್ನು ಕೋರ್ಟ್​ ಅನುಮತಿ ನೀಡಲಿಲ್ಲ. ಹೊಸ ಗಿಡ ನೆಟ್ಟರೂ ಅವು ನೂರಾರು ವರ್ಷದ ಹಳೆಯ ಗಿಡಗಳಂತೆ ಆಮ್ಲಜನಕ ಬಿಡುಗಡೆ ಮಾಡುವುದಿಲ್ಲ ಎಂದು ಕೋರ್ಟ್​ ಹೇಳಿದೆ.

ಮಥುರಾ ಜಿಲ್ಲೆಯ ಕೃಷ್ಣ ದೇವಾಲಯಕ್ಕೆ ಸಾಗುವ 25 ಕಿ.ಮೀ. ಉದ್ದ ರಸ್ತೆಯನ್ನು ವಿಸ್ತರಣೆಗೊಳಿಸಲು 2,940 ಮರಗಳನ್ನು ಕಡಿಯುವುದಕ್ಕೆ ಅನುಮತಿ ಕೋರಲಾಗಿತ್ತು.