ನ್ಯೂಸ್

ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ: ಆಪ್​ನ ಇಬ್ಬರು ಶಾಸಕರು ಅಪರಾಧಿಗಳು- ಕೋರ್ಟ್​ ಆದೇಶ

ನವದೆಹಲಿ: ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಪ್ರಚೋದನೆ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ ಇಬ್ಬರು ಶಾಸಕರು ಹಾಗೂ ಇತರ 15 ಮಂದಿ ತಪ್ಪಿತಸ್ಥರು ಎಂದು ಸಂಸದರು ಮತ್ತು ಶಾಸಕರ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ದೆಹಲಿಯ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ನಿಗದಿಯಾಗಬೇಕಿದೆ.

ಏಳು ವರ್ಷಗಳ ಹಿಂದೆ ಅಂದರೆ 2015ರ ಸೆಪ್ಟೆಂಬರ್​ 7ರಂದು ಬುರಾರಿ ಪೊಲೀಸ್ ಠಾಣೆಗೆ ಗುಂಪೊಂದು ನುಗ್ಗಿ ಗಲಭೆ ನಡೆಸಿರುವ ಘಟನೆ ಇದಾಗಿದೆ. ಈ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಗುಂಪಿಗೆ ಪ್ರಚೋದನೆ ನೀಡಿರುವ ಆರೋಪ ಶಾಸಕರಾದ ಅಖಿಲೇಶ್‌ ಪಾಟಿ ತ್ರಿಪಾಠಿ ಮತ್ತು ಸಂಜೀವ್ ಝಾ ಮೇಲೆ ಇದೆ. ಇವರನ್ನು ಅಪರಾಧಿಗಳೆಂದು ಇಂದು ಕೋರ್ಟ್​ ಹೇಳಿದೆ.

ಏನಿದು ಘಟನೆ?

ಪೊಲೀಸರು ಬಂಧನದಲ್ಲಿರಿಸಿದ್ದ ಇಬ್ಬರ ಮೇಲೆ ಹಲ್ಲೆಗೈಯುವ ಸಲುವಾಗಿ ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗುಂಪೊಂದು ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿತ್ತು. ಗುಂಪು ಹಿಂಸಾಚಾರಕ್ಕೆ ತಿರುಗಿದಾಗ ಸಂಜೀವ್ ಝಾ ಮತ್ತು ಅಖಿಲೇಶ್ ಪಾಟಿ ತ್ರಿಪಾಠಿ ಎಂಬ ಆರೋಪಿಗಳಿಬ್ಬರೂ ಸ್ಥಳದಲ್ಲಿ ಇದ್ದರು. ಗುಂಪನ್ನು ಸಮಾಧಾನಪಡಿಸಲು ಪೊಲೀಸರು ಯತ್ನಿಸಿದರೂ ಶಾಸಕರು ಗುಂಪಿಗೆ ಪ್ರಚೋದನೆ ನೀಡಿ ಹಲ್ಲೆ ಮತ್ತು ಕಲ್ಲು ತೂರಾಟ ನಡೆಸುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು.

"ಗುಂಪು ಹಿಂಸಾಚಾರಕ್ಕೆ ತಿರುಗಿದಾಗ ಸಂಜೀವ್ ಝಾ ಮತ್ತು ಅಖಿಲೇಶ್ ಪಾಟಿ ತ್ರಿಪಾಠಿ ಎಂಬ ಆರೋಪಿಗಳಿಬ್ಬರೂ ಸ್ಥಳದಲ್ಲಿ ಇದ್ದರು. ಪ್ರಚೋದನೆ ಮತ್ತು ಕುಮ್ಮಕ್ಕು ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ” ಎಂಬುದಾಗಿ ಕೋರ್ಟ್​ ಹೇಳಿದೆ (ಏಜೆನ್ಸೀಸ್​)