ನ್ಯೂಸ್

ಪತ್ನಿಗೆ ತಿಳಿಯದಂತೆ ಆರು ತಿಂಗಳ ಮಗು ಕದ್ದೊಯ್ದು ಮಾರಾಟ ಮಾಡಿದ ಅಪ್ಪ!

ಹೈದರಾಬಾದ್: ಹಣಕ್ಕಾಗಿ ತನ್ನ ಮಗುವನ್ನೇ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ ಇಲ್ಲೊಬ್ಬ ಅಪ್ಪ. ಹೈದರಾಬಾದ್​ನ ಚಾದರ್‌ಘಾಟ್ ಬಳಿ ಈ ಘಟನೆ ನಡೆದಿದೆ.

ಮಕ್ಕಳಿಲ್ಲದ ದಂಪತಿಗೆ 70 ಸಾವಿರ ರೂಪಾಯಿಗೆ ತನ್ನ ಮಗುವನ್ನು ಮಾರಾಟ ಮಾಡಿದ್ದಾನೆ. ಮಲಕ್‌ಪೇಟೆ ಏರಿಯಾ ಆಸ್ಪತ್ರೆಯ ಬಳಿಯ ಪಾದಚಾರಿ ಮಾರ್ಗದಲ್ಲಿ ಭಿಕ್ಷೆ ಬೇಡಿ ಜೀವನ ಮಾಡುತ್ತಿರುವ ರಾಜು ತನ್ನ ಪತ್ನಿ ಸಾರಾಗೆ ತಿಳಿಯದಂತೆ ಈ ಕೃತ್ಯ ಎಸಗಿದ್ದಾನೆ.

ಬೆಳಗ್ಗೆ ಎದ್ದು ನೋಡಿದಾಗ ಮಗು ಇರಲಿಲ್ಲ. ಪತಿ ಏನೇನೋ ಸಬೂಬು ಹೇಳಿದ. ಆದರೆ ಆಕೆಗೆ ಪತಿಯ ಮೇಲೆ ಅನುಮಾನ ಬಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತಿಯ ಮೇಲೆ ಅನುಮಾನ ಇರುವುದಾಗಿ ಹೇಳಿದ್ದಾಳೆ.

ನಂತರ ಪೊಲೀಸರು ರಾಜುವನ್ನು ಬಂಧಿಸಿ ಕೇಳಿದಾಗ ತಾನು ಮಾರಾಟ ಮಾಡಿರುವ ವಿಷಯ ತಿಳಿಸಿದ್ದಾನೆ. ಎಲ್‌ಬಿ ನಗರದ ಎನ್‌ಟಿಆರ್ ನಗರ ನಿವಾಸಿ ಅಫ್ರೀನ್‌ ದಂಪತಿಗೆ ಮಗು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ದಂಪತಿಗೆ 10 ವರ್ಷವಾದರೂ ಮಕ್ಕಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮಧ್ಯವರ್ತಿಯೊಬ್ಬನ ಸಹಾಯದಿಂದ ಮಗುವನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸದ್ಯ ಎಲ್ಲರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. (ಏಜೆನ್ಸೀಸ್​)