ನ್ಯೂಸ್

ಸೋಂಕಿತ ಬಾಲಕನಿಗೆ ಮರವೇ ಐಸೋಲೇಷನ್‌ ಸೆಂಟರ್‌! ಮನೆಯಲ್ಲಿಲ್ಲ ಜಾಗ, 11 ದಿನಗಳಿಂದ ಇಲ್ಲಿಯೇ ವಾಸ

ಹೈದರಾಬಾದ್: ಕಳೆದೊಂದು ವರ್ಷದಿಂದ ಕರೊನಾ ಹಾವಳಿ ಹೆಚ್ಚಾಗಿ ಬಹುತೇಕ ಶಾಲೆಗಳು ಆನ್‌ಲೈನ್‌ ಕ್ಲಾಸ್‌ ಮಾಡುತ್ತಿದ್ದ ಸಂದರ್ಭಗಳಲ್ಲಿ ನೆಟ್‌ವರ್ಕ್‌ ಸಿಗದೇ ವಿದ್ಯಾರ್ಥಿಗಳು, ಶಿಕ್ಷಕರು ಗುಡ್ಡದ ಮೇಲೆ, ಮರದ ಮೇಲೇರಿ ನೆಟ್‌ವರ್ಕ್‌ ಹುಡುತ್ತಿದ್ದರು, ಈಗಲೂ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕರೊನಾ ಸೋಂಕಿತ ವಿದ್ಯಾರ್ಥಿ ಮನೆಯಲ್ಲಿ ಜಾಗವಿಲ್ಲದೇ ಮರವನ್ನೇರಿ ಕುಳಿತಿರಬೇಕಾದ ದಾರುಣ ಘಟನೆ ನಡೆದಿದೆ.

ತೆಲಂಗಾಣದ ನಲಗೊಂಡ ಜಿಲ್ಲೆಯ ಕೊತಾನಂದಿಕೊಂಡ ಗ್ರಾಮದಲ್ಲಿ ವಾಸವಿರುವ ಶಿವ ಎಂಬ ವಿದ್ಯಾರ್ಥಿ 11 ದಿನಗಳಿಂದ ಮರದ ಮೇಲೆಯೇ ಕುಳಿತಿದ್ದಾನೆ. ಈತನಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಅದು ಮನೆಯವರಿಗೆ ಹರಡಬಾರದು ಎಂದು ಪ್ರತ್ಯೇಕವಾಗಿ ಮನೆಯಲ್ಲಿ ಹೋಂ ಐಸೋಲೇಷನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಇರುವ ಚಿಕ್ಕ ಮನೆಯಲ್ಲಿ ಪ್ರತ್ಯೇಕ ವಾಸ ಅಸಾಧ್ಯವೇ ಸರಿ. ಅದಕ್ಕಾಗಿಯೇ ಆತ ಪ್ರತ್ಯೇಕವಾಗಿ ಇರಲು ಮರವನ್ನೇರಿ ಕುಳಿತಿದ್ದಾನೆ.

ಇದು ಶಿವನೊಬ್ಬನ ಪಾಡಲ್ಲ. ಮನೆಯಲ್ಲಿ ಜಾಗವಿಲ್ಲದೇ, ಐಸೋಲೇಷನ್‌ ಸೆಂಟರ್‌ಗಳೂ ಇಲ್ಲದ ಎಲ್ಲಾ ಊರುಗಳ ಜನರ ಸ್ಥಿತಿಯೂ ಇದೇ ಆಗಿದೆ. ಈ ಕುರಿತು ತಾನು ಅನುಭವಿಸಿದ ನೋವನ್ನು ಹಂಚಿಕೊಂಡಿರುವ ಶಿವ, ’ನಮ್ಮಲ್ಲಿ ಯಾವುದೇ ಐಸೋಲೇಷನ್ ಸೆಂಟರ್‌ಗಳು ಇಲ್ಲ. ಇರುವುದು ಚಿಕ್ಕ ಮನೆ. ಅಲ್ಲಿ ಪ್ರತ್ಯೇಕ ವಾಸ ಅಸಾಧ್ಯ. ಕುಟುಂಬದ ಸದಸ್ಯರ ಜತೆ ಇದ್ದರೆ ಸೋಂಕು ಹರಡುವ ಭೀತಿ. ಬೇರೆ ಕಡೆಯೂ ಇರುವಂತಿಲ್ಲ. ಆದ್ದರಿಂದ ಏನು ಮಾಡಬೇಕು ಎಂದು ತಿಳಿಯದೇ ಮರವೇರಿ ಕುಳಿತುಕೊಳ್ಳುವ ನಿರ್ಧಾರ ಮಾಡಿದೆ’ ಎನ್ನುತ್ತಾನೆ.

ಇಲ್ಲಿಯವರ ಪಾಡು ಇಷ್ಟೇ ಅಲ್ಲ. ಗ್ರಾಮದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾದರೆ 5 ಕಿ.ಮಿ ಕ್ರಮಿಸಬೇಕು. ತುರ್ತು ಚಿಕಿತ್ಸೆಗಾಗಿ 30 ಕಿ.ಮಿ ಕ್ರಮಿಸಬೇಕಾದಂತಹ ಪರಿಸ್ಥಿತಿಯೂ ಇದೆ.