ನ್ಯೂಸ್

ಇನ್ಮುಂದೆ ರೈಲ್ವೆ ಪ್ರಯಾಣಿಕರ ಟೀ- ಕಾಫಿಗಿಲ್ಲ ಸೇವಾ ಶುಲ್ಕ: ಆದರೆ... ಉಳಿದ ಆಹಾರಗಳ ರೇಟ್​ ಹೀಗಾಯ್ತು ನೋಡಿ...

ನವದೆಹಲಿ: ಆಹಾರ ಪದಾರ್ಥಗಳ ವಿತರಣೆ ವೇಳೆ ಹೆಚ್ಚುವರಿ ಸೇವಾ ಶುಲ್ಕ ಪಡೆಯುವಂತಿಲ್ಲ. ಅಂಥ ಕ್ರಮ ಕಾನೂನು ಬಾಹಿರ ಎಂಬ ಕೇಂದ್ರ ಗ್ರಾಹಕ ಸಚಿವಾಲಯ ಈಚೆಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ, ಆಹಾರ ಪದಾರ್ಥಗಳ ವಿತರಣೆ ವೇಳೆ ಹೆಚ್ಚುವರಿ ಸೇವಾ ಶುಲ್ಕ ಪಡೆಯದೇ ಇರಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಆದ್ದರಿಂದ ಶತಾಬ್ದಿ, ತುರಂತ್‌, ರಾಜಧಾನಿ ಎಕ್ಸ್‌ಪ್ರೆಸ್‌ ಸೇರಿದಂತೆ ಕೆಲವು ರೈಲುಗಳಲ್ಲಿ ಈ ಮೊದಲು ಆಹಾರ ಪದಾರ್ಥ ವಿತರಣೆ ಮಾಡಿದ್ದಕ್ಕೆ ವಿಧಿಸುತ್ತಿದ್ದ 50 ಸೇವಾ ಶುಲ್ಕ ತೆಗೆದು ಹಾಕಲಾಗಿದೆ.

ರೈಲ್ವೆಯ ಹಿಂದಿನ ನಿಯಮಗಳ ಅನ್ವಯ ಶತಾಬ್ದಿ, ದುರಂತೋ, ರಾಜಧಾನಿ ಮೊದಲಾದ ರೈಲುಗಳಲ್ಲಿ ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡುವಾಗಲೇ ಕಾಫಿ, ಟೀ, ಉಪಹಾರ, ಊಟ, ಸಂಜೆ ಉಪಾಹಾರ ಬುಕ್‌ ಮಾಡಿದ್ದರೆ ಅದಕ್ಕೆ ಸೇವಾ ಶುಲ್ಕ ಹಾಕುತ್ತಿರಲಿಲ್ಲ. ಆದರೆ, ಇವುಗಳನ್ನು ರೈಲು ಹತ್ತಿದ ಮೇಲೆ ಬುಕ್‌ ಮಾಡಿದರೆ ಪ್ರತಿ ವಸ್ತುವಿಗೂ 50 ರೂಪಾಯಿ ಸೇವಾ ಶುಲ್ಕ ಕಟ್ಟಬೇಕಿತ್ತು. 20 ರೂ. ಟೀ/ಕಾಫಿಗೂ 50ರೂ. ಸೇವಾ ಶುಲ್ಕ ಕಟ್ಟಿ 70 ರೂ. ಕೊಡಬೇಕಿತ್ತು.

ಇದೀಗ ಪ್ರಯಾಣಿಕರು ಕೊಂಚ ನಿರಾಳರಾಗುವ ಆದೇಶ ಹೊರಬಂದಿದೆ. ಅದೇನೆಂದರೆ, ಕಾಫಿ- ಟೀಗೆ ವಿಧಿಸುತ್ತಿದ್ದ 50 ರೂಪಾಯಿ ಸೇವಾ ಶುಲ್ಕವನ್ನು ತೆಗೆದು ಹಾಕಲಾಗಿದೆ. ಇದರಿಂದಾಗಿ ಮೂಲ ಬೆಲೆಗೆ (20 ರೂಪಾಯಿಗೆ) ಕಾಫಿ-ಟೀ ಲಭ್ಯವಾಗಲಿದೆ.

ಹಾಗೆಯೇ ಉಳಿದ ಆಹಾರ ಪದಾರ್ಥ ವಿತರಣೆ ಮಾಡಿದ್ದಕ್ಕೆ ವಿಧಿಸುತ್ತಿದ್ದ 50 ಸೇವಾ ಶುಲ್ಕವನ್ನೂ ಇದೀಗ ತೆಗೆದು ಹಾಕಲಾಗಿದೆ. ಹಾಗೆಂದು ತುಂಬಾ ಖುಷಿ ಪಡುವ ಅಗತ್ಯವಿಲ್ಲ. ಏಕೆಂದರೆ ಕಾಫಿ- ಟೀ ಬಿಟ್ಟು ಉಳಿದ ಆಹಾರಗಳ ಮೂಲ ಬೆಲೆಯಲ್ಲಿಯೇ 50 ರೂಪಾಯಿ ಹೆಚ್ಚು ಮಾಡಲಾಗಿದೆ! ಇದರ ಅರ್ಥ, ರೈಲು ಸಂಚಾರದ ವೇಳೆ ನೀಡುವ ಬೆಳಗ್ಗಿನ ತಿಂಡಿಯ ಬೆಲೆಯನ್ನು 105 ರೂ. ನಿಂದ 155, ಮಧ್ಯಾಹ್ನದ ಊಟದ ದರವನ್ನು 185 ರೂ.ನಿಂದ 235 ರೂ.ಗೆ ಮತ್ತು ಸಂಜೆಯ ಸ್ನ್ಯಾಕ್ಸ್​ ದರವನ್ನು 90 ರೂನಿಂದ 140 ರೂ.ಗೆ ಹೆಚ್ಚಿಸಲಾಗಿದೆ. ಆದ್ದರಿಂದ ಈ ಹಿಂದೆ ಸೇವಾ ಶುಲ್ಕದ ರೂಪದಲ್ಲಿ ಕೊಡಬೇಕಿದ್ದ 50 ರೂಪಾಯಿಗಳನ್ನು ಆಹಾರಗಳ ಮೂಲ ದರದಲ್ಲಿಯೇ ಹೆಚ್ಚುವರಿಯಾಗಿ ನೀಡಬೇಕಿದೆ (ಏಜೆನ್ಸೀಸ್​)