ಕೀವ್: ಭಾರತಕ್ಕಿಂತ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮಾಡಬಹುದು ಎನ್ನುವ ಕಾರಣಕ್ಕೆ, ಎಂಬಿಬಿಎಸ್, ಇಂಜಿನಿಯರಿಂಗ್ ಸೇರಿದಂತೆ ಕೆಲವು ಕೋರ್ಸ್‌ಗಳನ್ನು ಮಾಡಲು ಯೂಕ್ರೇನ್‌ಗೆ ಹೋಗಿರುವ ವಿದ್ಯಾರ್ಥಿಗಳು ಇದೀಗ ಪ್ರಾಣ ಸಂಕಟದಲ್ಲಿದ್ದಾರೆ. ತಾಯ್ನಾಡಿಗೆ ವಾಪಸಾಗುವ ತರಾತುರಿಯಲ್ಲಿದ್ದಾರೆ.
ಭಾರತ ಸರ್ಕಾರ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು, ಸಾಕಷ್ಟು ಪ್ರಯತ್ನ ಪಡುತ್ತಿರುವ ನಡುವೆಯೇ, ಕೆಲ ವಿದ್ಯಾರ್ಥಿಗಳನ್ನು ಭಾರತದ ಧ್ವಜವೇ ಕಾಪಾಡಿದೆ. ಭಾರತದ ಧ್ವಜವನ್ನು ಹಿಡಿದುಕೊಂಡು ಬಂದ ವಿದ್ಯಾರ್ಥಿಗಳಿಗೆ ಯಾವುದೇ ಚೆಕ್ ಮಾಡದೇ ಗಡಿಯಿಂದ ಬಿಟ್ಟಿರುವ ಘಟನೆಯೂ ನಡೆದಿದೆ.
ಈ ಕುರಿತು ಮಾತನಾಡಿರುವ ವಿದ್ಯಾರ್ಥಿಗಳು, ‘ಭಾರತದ ಧ್ವಜ ಇದ್ದ ಕಾರಣ ನಾವು ಎಲ್ಲೂ ನಿಲ್ಲದೇ ಸುಲಭವಾಗಿ ಗಡಿಯನ್ನು ತಲುಪಿ ಸ್ವದೇಶವನ್ನು ತಲುಪಿದ್ದೇವೆ, ಧ್ವಜ ನಮ್ಮ ಪ್ರಾಣ ಕಾಪಾಡಿದೆ, ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಆಗ್ತಿದೆ’ ಎಂದಿದ್ದಾರೆ.
ರೂಮೇನಿಯಾದಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದ ಮೂಲಕ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವೇಳೆ ಬಿಹಾರ ವಿದ್ಯಾರ್ಥಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ತಮಗಾಗಿರುವ ಅನುಭವವನ್ನು ಹೇಳಿಕೊಂಡಿದ್ದಾರೆ. ರಾಷ್ಟ್ರಧ್ವಜ ನೋಡಿ ಯೂಕ್ರೇನ್ ಮತ್ತು ರಷ್ಯಾದವರು ಯಾರೂ ನಮ್ಮನ್ನು ತಡೆಯಲಿಲ್ಲ ನಡೆಯಲಿಲ್ಲ. ಸುಲಭವಾಗಿ ನಾವು ಗಡಿಯನ್ನು ತಲುಪಿದ್ದೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದು, ಅದರ ವಿಡಿಯೋ ವೈರಲ್ ಆಗಿದೆ.
‘ನಾವು ಮೂರು ರಾಜ್ಯವನ್ನು ದಾಟಿ ಬಂದೆವು. ಗಡಿಯಲ್ಲಿ ಸೈನಿಕರು ಪೊಲೀಸರು ಎಲ್ಲರೂ ಇದ್ದರು. ಆದರೆ ನಮ್ಮ ರಾಷ್ಟ್ರಧ್ವಜವನ್ನು ನೋಡಿ ತಪಾಸಣೆ ಮಾಡದೇ ಬಿಟ್ಟರು. ರಾಷ್ಟ್ರಧ್ವಜದೊಂದಿಗೆ ಬರುವಂತೆ ರಾಯಭಾರ ಕಚೇರಿ ಸೂಚಿಸಿತ್ತು. ಅದರಂತೆ ರಾಷ್ಟ್ರಧ್ವಜವನ್ನು ಬ್ಯಾಗಿನ ಮುಂಭಾಗ ಸಿಕ್ಕಿಸಿಕೊಂಡು ಗಡಿಯನ್ನು ದಾಟಿ ಏರ್ ಇಂಡಿಯಾ ವಿಮಾನವನ್ನು ಹತ್ತಿದೆವು’ ಎಂದಿದ್ದಾನೆ ವಿದ್ಯಾರ್ಥಿ.
ಯೂಕ್ರೇನ್ ಮತ್ತು ರಷ್ಯಾದ ಮಧ್ಯೆ ಭಾರತದ ಸಂಬಂಧ ಉತ್ತಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುತಿನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಜತೆ ಇದಾಗಲೇ ದೂರವಾಣಿ ಕರೆ ಮಾಡಿ ವಿದ್ಯಾರ್ಥಿಗಳ ಕುರಿತು ಮಾತನಾಡಿದ್ದರು.
ಇಲ್ಲಿದೆ ವಿಡಿಯೋ: