ನ್ಯೂಸ್

ದೇಶವೇ ಹೆಮ್ಮೆ ಪಡುವ ಕಾರ್ಯ ಮಾಡುವೆ- ತನಿಖಾಧಿಕಾರಿಗಳ ಮುಂದೆ ಶಾರುಖ್‌ ಪುತ್ರ ಆರ್ಯನ್‌ ವಾಗ್ದಾನ

ಮುಂಬೈ: ಡ್ರಗ್ಸ್ ಕೇಸ್‍ನಲ್ಲಿ ಸಿಲುಕಿ ಸದ್ಯ ಬಂಧನದಲ್ಲಿ ಇರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ನನ್ನು ತನಿಖಾಧಿಕಾರಿಗಳು ತೀವ್ರವಾಗಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ತನಿಖೆಯ ವೇಳೆ ಇಡೀ ಸಿನಿರಂಗ ಸೇರಿದಂತೆ ಘಟಾನುಘಟಿಗಳ ಡ್ರಗ್ಸ್‌ ಜಾಲ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ಇದರ ಮಧ್ಯೆಯೇ ತಾನೊಬ್ಬ ಉತ್ತಮ ಪ್ರಜೆಯಾಗಬೇಕು ಎಂಬ ಬಯಕೆಯನ್ನು ಆರ್ಯನ್‌ ಖಾನ್‌ ತನಿಖಾಧಿಕಾರಿಗಳ ಮುಂದೆ ಇಟ್ಟಿದ್ದಾನೆಂದು ತಿಳಿದುಬಂದಿದೆ. ಇನ್ನೆಂದೂ ಕೆಟ್ಟ ಹಾದಿ ತುಳಿಯಲ್ಲ, ಬಡವರಿಗೆ ಸಹಾಯ ಮಾಡುತ್ತೇನೆ. ದೇಶವೇ ಹೆಮ್ಮೆ ಪಡುವ ಕೆಲಸ ಮಾಡುತ್ತೇನೆ ಎಂದು ಆರ್ಯನ್‌ ಹೇಳಿದ್ದಾನೆ.

ಬಡವರು, ತುಳಿತಕ್ಕೊಳಗಾದವರ ಏಳಿಗೆಗಾಗಿ ದುಡಿಯುತ್ತೇನೆ, ಒಳ್ಳೆಯ ಕೆಲಸ ಮೂಲಕ ನನ್ನನ್ನು ಗುರುತಿಸಿಕೊಳ್ಳುತ್ತೇನೆ ಎಂದು ಮುಂಬೈ ವಲಯದ ನಿರ್ದೇಶಕ ಅಮೀರ್ ವಾಂಖೆಂಡೆ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಆತನ ಜತೆ ಎನ್‍ಸಿಬಿ ಮತ್ತು ಸಾಮಾಜಿಕ ಕಾರ್ಯಕರ್ತರು ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉತ್ತಮ ನಾಗರಿಕನಾಗುವ ಕನಸನ್ನು ಆತ ಕಂಡಿದ್ದಾನೆ ಎನ್ನಲಾಗಿದೆ.