ನ್ಯೂಸ್

ನೀನಿಲ್ಲದ ಜೀವನ ನನಗ್ಯಾಕೆ? ನಿನ್ನನ್ನು ಅಗಲಿ ಬದುಕಿರಲಾರೆ... ಕಣ್ಣೀರು ತರಿಸುವ ವೃದ್ಧನ ಡೆತ್​ನೋಟ್​

ಜೈಪುರ (ರಾಜಸ್ಥಾನ): ಈಗೆಲ್ಲಾ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ನಡೆಯುವುದು, ಅಕ್ರಮ ಸಂಬಂಧ ಹೊಂದುವುದು ಮಾಮೂಲು. ಆದರೆ ಇದರ ನಡುವೆಯೂ ಅದೆಷ್ಟೋ ದಂಪತಿ ಒಬ್ಬರನ್ನು ಬಿಟ್ಟು ಒಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿರುತ್ತಾರೆ. ಅದರಲ್ಲಿಯೂ ವೃದ್ಧಾಪ್ಯದಲ್ಲಿ ತಮ್ಮವರೆಲ್ಲರೂ ದೂರವಾದಾಗ ಪತಿಗೆ ಇರುವುದು ಪತ್ನಿ, ಪತ್ನಿಗೆ ಉಳಿಯುವುದು ಪತಿ. ಇವರಲ್ಲಿ ಒಬ್ಬರು ಅಗಲಿದರೂ ಇನ್ನೊಬ್ಬರ ಬದುಕು ಕಷ್ಟ ಎನಿಸಿಬಿಡುತ್ತದೆ.

ಅಂಥದ್ದೇ ಒಂದು ನೋವಿನ ಘಟನೆ ಜೈಪುರದಲ್ಲಿ ನಡೆದಿದೆ. 70 ವರ್ಷದ ವೃದ್ಧ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಈ ಬರಹವನ್ನು ನೋಡಿದರೆ ಎಂಥವರಿಗೂ ಕಣ್ಣೀರು ತರಿಸುವಂತಿದೆ.

ನಾನು ನನ್ನ ಹೆಂಡತಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕೆಯನ್ನು ಬಿಟ್ಟು ಇರಲಾರೆ. ಅವಳಿಲ್ಲದ ಭವಿಷ್ಯ ನೆನೆಸಿಕೊಂಡರೆ ಭಯವಾಗುತ್ತದೆ. ನನ್ನ ಸ್ವ-ಇಚ್ಛೆಯಿಂದ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ನರೇಂದ್ರ ಸಿಂಗ್ ಎಂಬ 70 ವರ್ಷದ ವೃದ್ಧ ನೇಣಿಗೆ ಶರಣಾಗಿದ್ದಾರೆ.

ರಾಜಸ್ಥಾನದ ಭರತ್‍ಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ನರೇಂದ್ರ ಸಿಂಗ್ ಕಳೆದ 20 ವರ್ಷಗಳಿಂದ ಜಿಲ್ಲಾ ಆಸ್ಪತ್ರೆ ಬಳಿ ಇರುವ ಧರ್ಮಶಾಲೆಯಲ್ಲಿ ಕಾವಲು ಕಾಯುತ್ತಿದ್ದರು. ಆದರೆ ಒಂದು ವರ್ಷದ ಹಿಂದೆ ಅವರ ಪತ್ನಿ ಭಗವಾನ್ ದೇಯಿ ಮೃತಪಟ್ಟರು. ನಂತರ ಅವರು ಒಂಟಿತನವನ್ನು ಅನುಭವಿಸುತ್ತಿದ್ದರು. ಅವರು ಖಿನ್ನತೆಗೆ ಜಾರಿದ್ದು, ಸದಾ ಪತ್ನಿಯನ್ನು ನೆನಪಿಸಿಕೊಳ್ಳುತ್ತದ್ದರು ಎನ್ನಲಾಗಿದೆ.

ಒಂದು ವರ್ಷ ಹಾಗೂ ಹೀಗೂ ಕಾಲ ನೂಕಿದ ನರೇಂದ್ರ ಸಿಂಗ್​ ಅವರಿಗೆ ಮುಂದಿನ ಭವಿಷ್ಯದ ಚಿಂತೆಯಾಗಿದೆ. ಪತ್ನಿಯನ್ನು ಬಿಟ್ಟು ತಾವೊಬ್ಬರೇ ಬದುಕುವುದು ಕಷ್ಟ ಎನಿಸಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪತ್ರ ಬರೆದಿಟ್ಟು ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ ಎಂದು ಮಥುರಾ ಗೇಟ್ ಠಾಣೆಯ ಅಧಿಕಾರಿ ರಾಮನಾಥ್ ಗುರ್ಜರ್ ಮಾಹಿತಿ ನೀಡಿದ್ದಾರೆ.